ಕುಂದಾಪುರ: ಕಾಡು ಪೊದೆಯಲ್ಲಿ ನವಜಾತ ಶಿಶುವೊಂದನ್ನು ಎಸೆದುಹೋದ ಘಟನೆ ಕುಂದಾಪುರ ತಾಲೂಕಿನ ಮಚ್ಚಟ್ಟು ಗ್ರಾಮದ ಸೇತುವೆ ಬಳಿಯ ಕಾಡಿನಲ್ಲಿ ನಡೆದಿದೆ. ಡೇರಿಗೆ ಹಾಲು ಕೊಡಲು ಹೋಗುತ್ತಿದ್ದ ಮಹಿಳೆ ಮಗುವನ್ನು ರಕ್ಷಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಮಚ್ಚಟ್ಟು ಗ್ರಾಮದ ಮಡಿವಾಳಕಟ್ಟು ನಿವಾಸಿ ಗೀತಾ ಅವರು ಬುಧವಾರ ಸಂಜೆ ಸುಮಾರು 4.30ಕ್ಕೆ ಸುಮಾರಿಗೆ ಡೇರಿಗೆ ಹಾಲು ಕೊಡಲು ಹೋಗುತ್ತಿದ್ದರು. ಈ ವೇಳೆ ಅವರಿಗೆ ಮಚ್ಚಟ್ಟು ಗ್ರಾಮದ ಸೇತುವೆ ಬಳಿ ರಸ್ತೆಯ ಬದಿಯ ಕಾಡು ಪೊದೆಯಲ್ಲಿ ಮಗು ಅಳುವ ಶಬ್ದ ಕೇಳಿಸಿದೆ. ಹೋಗಿ ನೋಡಿದಾಗ ಸುಮಾರು 7 ದಿನಗಳ ನವಜಾತ ಹೆಣ್ಣು ಶಿಶು ಆಳುತ್ತಿತ್ತು. ಕೂಡಲೇ ಅವರು ಮಗುವನ್ನು ಎತ್ತಿ ಅಮಾಸೆಬೈಲು ಪೊಲೀಸ್ ಠಾಣೆಗೆ ತಂದಿದ್ದರು. ಅಮಾಸೆಬೈಲು ಪಿಎಸ್ಐ ಸುಬ್ಬಣ್ಣ ಹಾಗೂ ಸಿಬ್ಬಂದಿಗಳಿಗೆ ಮಗುವನ್ನು ಹಸ್ತಾಂತರಿಸಿದ್ದು, ಅಧಿಕಾರಿಗಳು ಮುಂದಿನ ಕ್ರಮಕೈಗೊಂಡಿದ್ದಾರೆ. ಸದ್ಯ ಮಗು ಆರೋಗ್ಯದಿಂದ ಇದೆ ತಿಳಿದುಬಂದಿದೆ.
ಮಗುವನ್ನು ಹಡೆದಿರುವ ತಾಯಿ ಪಾಲನೆ ಪೋಷಣೆ ಮಾಡದೆ ಮಗುವನ್ನು ಅಪಾಯಕ್ಕೋಡ್ಡುವ ಉದ್ದೇಶದಿಂದ ರಸ್ತೆ ಬದಿಯ ಕಾಡು ಪೊದೆಯಲ್ಲಿ ಅಪಾಯಕರ ಸ್ಥಿತಿಯಲ್ಲಿ ಎಸೆದು ಹೋಗಿದ್ದಾರೆ. ಈ ಬಗ್ಗೆ ಅಮಾಸೆಬೈಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.