ಬೆಂಗಳೂರು: ಉದ್ಯಮಗಳು, ಶಿಕ್ಷಣ ಸಂಸ್ಥೆಗಳು ಮತ್ತು ಆಸ್ಪತ್ರೆಗಳು ಆಕ್ಯುಪೆನ್ಸಿ ಪ್ರಮಾಣಪತ್ರವನ್ನು(ಒಸಿ) ನೀಡದೆಯೇ ವಿದ್ಯುತ್ ಸರಬರಾಜು ಪಡೆಯಬಹುದು ಎಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ಸಾರ್ವಜನಿಕ ಪರಿಶೀಲನೆಗೆ ಹೊರಡಿಸಿರುವ ಕರಡು ನಿಯಮಗಳಲ್ಲಿ ಪ್ರಸ್ತಾಪಿಸಿದೆ.
ಕೇವಲ ವ್ಯವಹಾರಗಳಷ್ಟೇ ಅಲ್ಲ, ವಸತಿ ಮತ್ತು ವಾಣಿಜ್ಯ ಕಟ್ಟಡಗಳಿಗೆ ವಿದ್ಯುತ್ ಸರಬರಾಜು ಮಾಡುವ ನಿಟ್ಟಿನಲ್ಲಿಯೂ ಒಸಿ ಅನ್ನು ತೆಗೆದುಹಾಕಲು ಆಯೋಗವು ಪ್ರಸ್ತಾಪಿಸಿದೆ.
ಕರ್ನಾಟಕ ರಾಜ್ಯದಲ್ಲಿನ ವಿತರಣಾ ಪರವಾನಗಿದಾರರ ವಿದ್ಯುತ್ ಪೂರೈಕೆಯ ಕರಡು ಷರತ್ತುಗಳ ಮೇಲೆ (ಹತ್ತನೇ ತಿದ್ದುಪಡಿ), 2022, ಬಗ್ಗೆ ಸಲಹೆಗಳು ಅಥವಾ ಆಕ್ಷೇಪಣೆಗಳಿದ್ದಲ್ಲಿ ನಾಗರಿಕರು ಮೇ 30 ರ ಮೊದಲು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವನ್ನು ಸಂಪರ್ಕಿಸಬಹುದು.
ಕೆಇಆರ್‌ಸಿ ಅಧಿಸೂಚನೆಯ ಪ್ರಕಾರ, ಬೆಂಗಳೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿನ ಕಟ್ಟಡಗಳಿಗೆ ಒಸಿ ಅಗತ್ಯವನ್ನು ಸರ್ಕಾರ ಈಗಾಗಲೇ ತೆಗೆದುಹಾಕಿದೆ. ಕಟ್ಟಡ ಬಳಸಲು ಯೋಗ್ಯವೆಂದು ಘೋಷಿಸಲು ಪುರಸಭೆಗಳು ಒಸಿ ನೀಡುತ್ತವೆ. ಒಸಿ ಯ ಅಲಭ್ಯತೆಯು ಸಾಮಾನ್ಯವಾಗಿ ಕಟ್ಟಡವು ಕಾನೂನುಗಳನ್ನು ಉಲ್ಲಂಘಿಸಿದೆ ಎನ್ನುವ ಅರ್ಥವನ್ನು ನೀಡುತ್ತದೆ.
ಈಗ, ಪ್ರಸ್ತಾವಿತ ಷರತ್ತು ಕರ್ನಾಟಕದಾದ್ಯಂತ ಅನ್ವಯಿಸುತ್ತದೆ.