ಮಂಗಳೂರು: ಆಗಸ್ಟ್ 5ರವರೆಗೆ ನಿಷೇಧಾಜ್ಞೆ ಮುಂದುವರಿಕೆ

ಮಂಗಳೂರು: ದ.ಕ ವ್ಯಾಪ್ತಿಯಲ್ಲಿ ಬೆನ್ನು ಬೆನ್ನಿಗೆ ಕೊಲೆ ನಡೆದಿರುವ ಹಿನ್ನೆಲೆಯಲ್ಲಿ, ಕರಾವಳಿ ಜಿಲ್ಲೆಯು ಕುದಿಯುವ ಬಾಣಲೆಯಂತಾಗಿದ್ದು, ಪರಿಸ್ಥಿತಿಯನ್ನು ಹತೋಟಿಯಲ್ಲಿಡಲು ಮಂಗಳೂರು ನಗರ ಪೊಲೀಸ್ ಇಲಾಖೆ ನಿರ್ಧರಿಸಿದ್ದು, ಆಗಸ್ಟ್ 1 ರವರೆಗಿದ್ದ ನಿಷೇಧಾಜ್ಞೆಯನ್ನು ಆಗಸ್ಟ್ 5ರ ಸಂಜೆ 6 ಗಂಟೆವರೆಗೆ ವಿಸ್ತರಿಸಲಾಗಿದೆ ಎಂದು ಮಂಗಳೂರು ಕಮಿಷನರ್ ಎನ್.ಶಶಿಕುಮಾರ್ ತಿಳಿಸಿದ್ದಾರೆ.

ನಿಷೇಧಾಜ್ಞೆ ಸಂದರ್ಭದಲ್ಲಿ ಸಾರ್ವಜನಿಕವಾಗಿ ಯಾವುದೇ ಕೂಗನ್ನು ಉಚ್ಚರಿಸುವಂತಿಲ್ಲ. ಚೇಷ್ಟೆ, ಸಾರ್ವಜನಿಕ ಭದ್ರತೆ ಶಿಥಿಲಗೊಳ್ಳುವಂತಹ ಯಾವುದೇ ರೀತಿಯ ಅಪರಾಧ ಎಸಗುವ ಕ್ರಿಯೆಯನ್ನು ಪ್ರೇರೇಪಿಸುವ ಕ್ರಮವನ್ನು ನಿಷೇಧಿಸಿದೆ. ನಿಷೇಧಿತ ಪ್ರದೇಶಗಳಲ್ಲಿ ಸಾರ್ವಜನಿಕವಾಗಿ 5 ಜನ ಮತ್ತು ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಗುಂಪು ಸೇರುವಂತಿಲ್ಲ ಮತ್ತು ತಿರುಗಾಡುವಂತಿಲ್ಲ. ಶಸ್ತ್ರಗಳು, ದೊಣ್ಣೆ, ಕತ್ತಿ, ಬಂದೂಕು ಚಾಕು ಸೇರಿದಂತೆ ಮಾರಕಾಸ್ತ್ರಗಳನ್ನು ಸಾಗಾಟ ಮಾಡುವಂತಿಲ್ಲ. ಪಟಾಕಿ ಅಥವಾ ಸ್ಪೋಟಕ ಪದಾರ್ಥಗಳನ್ನು ಸಿಡಿಸುವಂತಿಲ್ಲ. ಪ್ರತಿಕೃತಿಗಳ ದಹನ ಮತ್ತು ಪ್ರದರ್ಶನ ನಿಷೇಧಿಸಲಾಗಿದೆ. ಕಲ್ಲುಗಳನ್ನು ಸಂಗ್ರಹಿಸುವುದು ಮತ್ತು ಎಸೆಯುವುದು ಮಾಡುವಂತಿಲ್ಲ. ಸರ್ಕಾರಿ ಸಂಸ್ಥೆ, ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವಂತಿಲ್ಲ. ಪ್ರಚೋದನಕಾರಿ ಭಾಷಣ, ಅವಾಚ್ಯ ಪದಗಳ ಬಳಕೆ,ಕೋಮು ಭಾಷಣಗಳ ಪ್ರಕಟನೆ, ಸಿಬ್ಬಂದಿ ವಿರುದ್ಧ ಅವಹೇಳನಕಾರಿ ಭಾಷಣ ಮಾಡುವಂತಿಲ್ಲ ಮತ್ತು ಪ್ರಸಾರ ಮಾಡುವಂತಿಲ್ಲ.