ಪ್ರೀತಿಯಿಂದ ಬಾಳುವುದನ್ನು ಕಲಿಯಿರಿ: ರಾಜ ನಿರ್ಮಾಲ್ ನಾಥಜೀ ಸ್ವಾಮೀಜಿ

ಉಡುಪಿ: ಮನುಷ್ಯನ ಬದುಕಿನಲ್ಲಿ ಸುಖ–ದುಃಖ, ಗೆಲುವು–ಸೋಲು ಎಂಬುದು ಆತನ ಕರ್ಮದಿಂದ ಬರುತ್ತದೆ. ಪ್ರತಿಯೊಂದು ಕಾರ್ಯವನ್ನು ಪ್ರೀತಿಯಿಂದ ನಿರ್ವಹಿಸಿದರೆ ಯಶಸ್ಸು ಸಾಧ್ಯವಾಗುತ್ತದೆ. ಬದುಕಿನಲ್ಲಿ ಎಲ್ಲರನ್ನು ಪ್ರೀತಿಸುವುದರೊಂದಿಗೆ ಜೀವಿಸಬೇಕು.
ಭಗವಂತ ಪ್ರೀತಿ, ಧ್ಯಾನ, ಭಕ್ತಿಗೆ ಒಲಿಯುತ್ತಾನೆ. ಧಾನ್ಯಕ್ಕಿಂತ ದೊಡ್ಡ ಕಾರ್ಯ ಬೇರೊಂದಿಲ್ಲ ಎಂದು ಕದ್ರಿ ಯೋಗೀಶ್ವರ ಮಠದ ರಾಜ ನಿರ್ಮಾಲ್ ನಾಥಜೀ ಸ್ವಾಮೀಜಿ
ಹೇಳಿದರು.
ಜೋಗಿ ಸಮಾಜ ಸೇವಾ ಸಮಿತಿ ಉಡುಪಿ-ಕಾರ್ಕಳ ವತಿಯಿಂದ ಉಡುಪಿ ಶ್ರೀಕೃಷ್ಣಮಠದ
ರಾಜಾಂಗಣದಲ್ಲಿ ಭಾನುವಾರ ನಡೆದ ಸಮಿತಿಯ ದಶಮಾನೋತ್ಸವ ‘ಜೋಗಿ ದಶಮಿ–2019’ ಹಾಗೂ ಜೋಗಿ ವಟುಗಳ ದೀಕ್ಷಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೆತ್ತವರನ್ನು ಪ್ರೀತಿಸದ ವ್ಯಕ್ತಿ ಎಷ್ಟೆ ದೊಡ್ಡ ಕರ್ಮ ಮಾಡಿದರೂ, ಕಲಿತರು ಯಾವುದೇ ಪ್ರಯೋಜನ ಇಲ್ಲ. ಆದ್ದರಿಂದ ಪ್ರತಿಯೊಬ್ಬರು ತಂದೆ ತಾಯಿಯನ್ನು ಪ್ರೀತಿಸಬೇಕು ಮತ್ತು ಅವರ ಸೇವೆ ಮಾಡಬೇಕು. ಆಗ ದೇವರು ನಮಗೆ ಸುಖ ಶಾಂತಿ ಸಹಿತ ಎಲ್ಲವನ್ನು ನೀಡುತ್ತಾನೆ ಎಂದರು.
ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಮಾತನಾಡಿ, ದೇಶದ ರಕ್ಷಣೆ ಆಗಬೇಕಾದರೆ ಧರ್ಮ ರಕ್ಷಣೆ ಆಗಬೇಕು. ಧರ್ಮವನ್ನು ರಕ್ಷಿಸಬೇಕಾದರೆ ಯುವ ಪೀಳಿಗೆಗೆ ನಮ್ಮ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯ ಹಾಗೂ ಪರಂಪರೆಯನ್ನು ತಿಳಿಸಿಕೊಡಬೇಕು. ಈ ನಿಟ್ಟಿನಲ್ಲಿ ದೀಕ್ಷೆ ನೀಡುವ ಕಾರ್ಯಕ್ರಮ ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯುತ್ತದೆ.
ಅಲ್ಲದೆ, ಧರ್ಮ ಹಾಗೂ ದೇಶ ರಕ್ಷಣೆಗೆ ಇದು ಕೂಡ ಪೂರಕ ಆಗಿದೆ ಎಂದರು.
ಜೋಗಿ ಸಮಾಜ ಸೇವಾ ಸಮಿತಿ ಅಧ್ಯಕ್ಷ ಪಿ. ಸುರೇಶ್‌ ಕುಮಾರ್‌ ಜೋಗಿ ಹೆಬ್ರಿ ಅಧ್ಯಕ್ಷತೆ ವಹಿಸಿದ್ದರು. ಬಡಗುಬೆಟ್ಟು ಕೋ ಆಪರೇಟಿವ್‌ ಸೊಸೈಟಿಯ ವ್ಯವಸ್ಥಾಪಕ ನಿರ್ದೇಶಕ ಇಂದ್ರಾಳಿ ಜಯಕರ ಶೆಟ್ಟಿ, ಸಾಯಿರಾಧ ಗ್ರೂಪ್‌ನ ಮಾಲೀಕ ಮನೋಹರ್‌ ಶೆಟ್ಟಿ, ಕೋಟ ಅಮೃತೇಶ್ವರಿ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ ಸಿ. ಕುಂದರ್‌, ಉಜ್ವಲ್‌ ಡೆವಲಪರ್ಸ್‌ ಮಾಲೀಕ ಪುರುಷೋತ್ತಮ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಬೆಂಗಳೂರು ಜೋಗಿ ಸಮಾಜ ಸುಧಾರಕ ಸಂಘದ ಅಧ್ಯಕ್ಷ ರಾಜಶೇಖರ ಜೋಗಿ, ಕರ್ನಾಟಕ ಜೋಗಿ ಸುಧಾರಕ ಸಂಘದ ಅಧ್ಯಕ್ಷ ಕಿರಣ್‌ ಕುಮಾರ್‌ ಜೋಗಿ, ಹಲವರಿ ಮಠ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶೇಖರ ಜೋಗಿ ಕಟ್‌ಬೇಲ್ತೂರು, ಉದ್ಯಮಿಗಳಾದ ಚಂದ್ರಶೇಖರ ಜೋಗಿ, ಶ್ರೀನಿವಾಸ ಜೋಗಿ, ಉದಯಕುಮಾರ್‌ ಜೋಗಿ ಬಜಗೋಳಿ, ಉದಯ ಜೋಗಿ, ಜೋಗಿ ಮಹಿಳಾ ವೇದಿಕೆ ಅಧ್ಯಕ್ಷೆ ಎನ್‌. ಲಕ್ಷ್ಮೀ ಜೋಗಿ, ಸಂಜಯ್‌, ನವೀನ್‌ಚಂದ್ರ ಜೋಗಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಇಂದ್ರಾಳಿ ಜಯಕರ ಶೆಟ್ಟಿ, ಮನೋಹರ್‌ ಶೆಟ್ಟಿ, ಆನಂದ ಸಿ. ಕುಂದರ್‌ ಹಾಗೂ ಪುರುಷೋತ್ತಮ ಶೆಟ್ಟಿ ಅವರನ್ನು ಸಮಿತಿಯ ವತಿಯಿಂದ ಗೌರವಿಸಲಾಯಿತು.