ಉಡುಪಿಯ ಕೈದಿಯಿಂದ ಸಹ ಕೈದಿಗಳ ಮೇಲೆ ಮಾರಣಾಂತಿಕ ಹಲ್ಲೆ

ಶಿವಮೊಗ್ಗ: ಕೈದಿಗಳು ಪರಸ್ಪರ ಹೊಡೆದಾಡಿಕೊಂಡ ಘಟನೆ ಶಿವಮೊಗ್ಗ ಜಿಲ್ಲೆಯ ಮಲವಗೊಪ್ಪದ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ. ಈ ಮಾರಾಮಾರಿಯಲ್ಲಿ ಮೂರು ಕೈದಿಗಳಿಗೆ ಗಾಯವಾಗಿದ್ದು, ಆ ಪೈಕಿ ಓರ್ವ ಕೈದಿಯ ಸ್ಥಿತಿ ಗಂಭೀರವಾಗಿದೆ.

ನಿನ್ನೆ ರಾತ್ರಿ ಊಟ ಮುಗಿದ ಮೇಲೆ ಕುಡಿಯುವ ನೀರಿನ ವಿಚಾರಕ್ಕೆ ಕೈದಿಗಳ ನಡುವೆ ಜಗಳ ಆರಂಭವಾಗಿದೆ ಎನ್ನಲಾಗಿದೆ. ಉಡುಪಿ ಮೂಲದ ಪ್ರಶಾಂತ್ ಎಂಬ ಕೈದಿ ಸಹ ಕೈದಿಗಳಾದ ಮಲ್ಲೇಶ್, ದೇವೇಂದ್ರಪ್ಪ ಹಾಗೂ ಚಿಕ್ಕಮಗಳೂರಿನ ಬೆನಕಶೆಟ್ಟಿ ಎಂಬುವವರಿಗೆ ಲೋಟದಿಂದ ಹಲ್ಲೆ ನಡೆಸಿ, ಚಮಚದಿಂದ ಇರಿದಿದ್ದಾನೆ.

ಘಟನೆಯಲ್ಲಿ ಮಲ್ಲೇಶ್ ಸ್ಥಿತಿ ಗಂಭೀರವಾಗಿದೆ. ಆತನ ಎದೆ ಮತ್ತು ಹೊಟ್ಟೆ ಭಾಗಕ್ಕೆ ತೀವ್ರ ಸ್ವರೂಪದ ಗಾಯವಾಗಿದೆ. ಈ ಘಟನೆಯಲ್ಲಿ ಎಲ್ಲರೂ ಗಾಯಗೊಂಡಿದ್ದು, ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕೈದಿ ಪ್ರಶಾಂತ್ ಉಡುಪಿಯಲ್ಲಿ ಅಪರಾಧ ಎಸಗಿ ಶಿಕ್ಷೆಗೆ ಒಳಗಾಗಿದ್ದಾನೆ. ಈತ ಉಡುಪಿ ನ್ಯಾಯಾಲಯದಲ್ಲಿ ನ್ಯಾಯಾಧೀಶರನ್ನು ನಿಂದಿಸಿ ಭಾರಿ ಸುದ್ದಿಯಾಗಿದ್ದ. ಅಲ್ಲದೆ, ಆಗಾಗ್ಗೆ ಸಹ ಕೈದಿಗಳೊಂದಿಗೆ ಜಗಳವಾಡುತ್ತಿದ್ದ ಎನ್ನಲಾಗಿದೆ. ಪ್ರಶಾಂತ್ ವರ್ತನೆ ಬಗ್ಗೆ ಹಲವು ಬಾರಿ ಸಹ ಕೈದಿಗಳು ಜೈಲಿನ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.