ಉಡುಪಿ: ಬಿಜೆಪಿ ಉಡುಪಿ ಜಿಲ್ಲಾ ಮಾಧ್ಯಮ ಕೇಂದ್ರದಲ್ಲಿ ಬುಧವಾರದಂದು ಉಡುಪಿ ವಿಧಾನಸಭಾ ಕ್ಷೇತ್ರದ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ಯಶ್ ಪಾಲ್ ಸುವರ್ಣ ಉಡುಪಿಯನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ಸಂಕಲ್ಪದೊಂದಿಗೆ ಈ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದೇವೆ. ನಗರದಲ್ಲಿ ಬಹುಮುಖ್ಯವಾಗಿ ಬೇಕಾಗಿರುವ ಬಹುಮಡಿ ಪಾರ್ಕಿಂಗ್ ಸಂಕೀರ್ಣ ನಿರ್ಮಾಣ, ಕಲ್ಸಂಕ ಜಂಕ್ಷನ್ ನಲ್ಲಿ 70 ಮೀಟರ್ ವ್ಯಾಸವುಳ್ಳ ಸಿಗ್ನಲ್ ರಹಿತ ಮಧ್ವಾಚಾರ್ಯ ವೃತ್ತ ನಿರ್ಮಾಣ, ಒಳಚರಂಡಿ ವ್ಯವಸ್ಥೆಯ ಪುನನಿರ್ಮಾಣ, 35 ವಾರ್ಡ್ ನಲ್ಲಿ ವೈಜ್ಞಾನಿಕ ರೀತಿಯಲ್ಲಿ ಒಳ ಚರಂಡಿ ವ್ಯವಸ್ಥೆ, ಮಲ್ಪೆಯಲ್ಲಿ ಮಧ್ವಾಚಾರ್ಯ ಥೀಮ್ ಪಾರ್ಕ್ ನಿರ್ಮಾಣ, ಮಣಿಪಾಲದಲ್ಲಿ ವಿಶೇಷ ಆಹಾರ ವಲಯ ನಿರ್ಮಾಣ, ಮಣಿಪಾಲದ ಮಣ್ಣಪಳ್ಳದಲ್ಲಿ ಉದ್ಯಾನವನ ನಿರ್ಮಾಣ, ಸ್ವರ್ಣ ನದಿ ತೀರದಲ್ಲಿರುವ ಸರಕಾರಿ ದ್ವೀಪದಲ್ಲಿ ಅಮ್ಯೂಸ್ ಮೆಂಟ್ ಪಾರ್ಕ್ ನಿರ್ಮಾಣ, ನದಿ ದಂಡೆಗಳ ಸಂರಕ್ಷಣೆ, ವಾರಾಹಿ ನದಿಯಿಂದ ಏತ ನೀರಾವರಿ ಯೋಜನೆಯ ಮೂಲಕ ಸೀತಾನದಿಗೆ ನಿರಂತರವಾಗಿ ನೀರು ಹಾಯಿಸಿ ಜೀವ ತುಂಬುವ ಯೋಜನೆಗಳನ್ನು ನಮ್ಮ ಪ್ರಣಾಳಿಕೆ ಒಳಗೊಂಡಿದೆ ಎಂದರು.
ಮಲ್ಪೆ ಬಂದರು ಮತ್ತು ಮೀನುಗಾರಿಕಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆದ್ಯತೆ
ಮಲ್ಪೆ ಬಂದರು ಮತ್ತು ಮೀನುಗಾರಿಕಾ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಆದ್ಯತೆಗಾಗಿ ವಿಶೇಷ ಪ್ರಣಾಳಿಕೆಯನ್ನು ಕೂಡಾ ಈ ಸಂದರ್ಭದಲ್ಲಿ ಘೋಷಿಸಲಾಯಿತು. ನಾಡದೋಣಿ ಮೀನುಗಾರರರಿಗೆ ವರ್ಷಪೂರ್ತಿ ನಿರಂತರವಾಗಿ ತಿಂಗಳಿಗೆ 500 ಲೀಟರ್ ಸೀಮೆ ಎಣ್ಣೆ, ಕೃಷಿ ಕ್ಷೇತ್ರದ ಸೌಲಭ್ಯಗಳನ್ನು ಮೀನುಗಾರಿಕಾ ಕ್ಷೇತ್ರಕ್ಕೂ ವಿಸ್ತರಣೆ, ನಾಡದೋಣಿ ಮೀನುಗಾರರ ದೋಣಿಗಳ ತಂಗುದಾಣಕ್ಕೆ 3ನೇ ಹಂತದ ಬಳಿ ಜಟ್ಟಿ ನಿರ್ಮಾಣ, ಒಣ ಮೀನುಗಾರಿಕೆ ಮಾಡುವ ಮಹಿಳಾ ಮೀನುಗಾರರರ ಜಾಗ 30 ವರ್ಷ ಧೀರ್ಘ ಗುತ್ತಿಗೆ ವಿಸ್ತರಣೆ, ಮೀನುಗಾರ ಮಹಿಳೆಯರಿಗೆ 0% ಬಡ್ಡಿಯಲ್ಲಿ 5 ಲಕ್ಷದಿಂದ 20 ಲಕ್ಷದವರೆಗೆ ಗುಂಪು ಸಾಲ ನೀಡುವುದು, ಮೀನುಗಾರರರಿಗೆ ಮತ್ಸಾಶ್ರಯ ಮನೆ ನಿರ್ಮಾಣಕ್ಕೆ ಸಹಾಯಧನ 1.2 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ, ಮಹಿಳಾ ಮೀನುಗಾರರಿಗೆ ಮತ್ಯವಾಹಿನಿ ವಾಹನ ಸೌಲಭ್ಯ, ಆರೋಗ್ಯ ಸುರಕ್ಷತೆಯ ತುರ್ತು ಸೀ- ಆಂಬ್ಯುಲೆನ್ಸ್ ಸೇವೆಗಳ ಭರವಸೆಗಳನ್ನು ಉಡುಪಿ ಬಿಜೆಪಿ ನೀಡಿದೆ.
ಸಭೆಯಲ್ಲಿ ಶಾಸಕ ರಘುಪತಿ ಭಟ್, ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್, ಗ್ರಾಮಾಂತರ ಬಿಜೆಪಿ ಅಧ್ಯಕ್ಷೆ ವೀಣಾ ನಾಯ್ಕ್, ಪ.ಜಾ/ಪ.ಪಂ ಮೋರ್ಚಾದ ದಿನಕರ್ ಕಟ್ಟೆಗುಡ್ಡೆ, ಪ್ರಣಾಳಿಕೆ ರಚನಾ ಸಮಿತಿಯ ಸಂಚಾಲಕ ಅಂಡಾರು ದೇವಿಪ್ರಸಾದ್ ಶೆಟ್ಟಿ, ಸದಸ್ಯರಾದ ಮಂಜುನಾಥ್ ಮಣಿಪಾಲ, ಜಿಲ್ಲಾ ವಕ್ತಾರ ರಾಘವೇಂದ್ರ ಕಿಣಿ ಉಪಸ್ಥಿತರಿದ್ದರು.