ವಾಹನಗಳ ಸುಗಮ ಸಂಚಾರಕ್ಕೆ ಆದ್ಯತೆ ನೀಡಿ ಅಪಘಾತ ಪ್ರಮಾಣ ತಗ್ಗಿಸಿ: ಡಾ. ಕೆ ವಿದ್ಯಾಕುಮಾರಿ

ಉಡುಪಿ: ಜಿಲ್ಲೆಯಲ್ಲಿ ಸಾರ್ವಜನಿಕರ ಸುಗಮ ಮತ್ತು ಸುರಕ್ಷಿತ ಸಂಚಾರಕ್ಕೆ ಅಗತ್ಯವಿರುವ ರಸ್ತೆ ಸುಧಾರಣಾ ಮೂಲಭೂತ ಕಾಮಗಾರಿಗಳನ್ನು ಕೈಗೊಂಡು ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟು ಅಪಘಾತ ಪ್ರಮಾಣವನ್ನು ಅತ್ಯಂತ ಕಡಿಮೆಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬುಧವಾರ ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ, ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಈಗಾಗಲೇ 30 ಕ್ಕೂ ಹೆಚ್ಚು ಅಪಘಾತ ವಲಯ ಬ್ಲಾಕ್ ಸ್ಪಾಟ್‌ಗಳನ್ನು ಗುರುತಿಸಲಾಗಿದ್ದು, ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗೆ ಸಂಬಂಧಿಸಿದ ಅಧಿಕಾರಿಗಳು ತತ್‌ಕ್ಷಣದಲ್ಲಿಯೇ ಸುರಕ್ಷಿತಾ ಸೌಕರ್ಯಗಳ ಕಾರ್ಯಗಳನ್ನು ವೈಜ್ಞಾನಿಕವಾಗಿ ಕೈಗೊಂಡು ಅಪಘಾತಗಳನ್ನು ತಪ್ಪಿಸಲು ಮುಂದಾಗಬೇಕು ಎಂದರು.

ಇಂದ್ರಾಳಿ ರೈಲ್ವೆ ಮೇಲು ಸೇತುವೆ ಮೇಲಿನ ರಸ್ತೆ ಆಭಿವೃದ್ಧಿ ಕಾಮಗಾರಿಗಳನ್ನು ಮುಂಬರುವ ಡಿಸೆಂಬರ್ ಒಳಗಾಗಿ ಪೂರ್ಣಗೊಳಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಈ ಬಗ್ಗೆ ರೈಲ್ವೇ ಇಲಾಖೆಯ ಅಧಿಕಾರಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.

ಇಂದ್ರಾಳಿಯ ರೈಲ್ವೆ ಮೇಲ್ಸೇತುವೆಯ ಎರಡೂ ಭಾಗದ 100 ಮೀ. ವ್ಯಾಪ್ತಿಯಲ್ಲಿ ಯಾವುದೇ ಬಸ್‌ಗಳು ನಿಲ್ಲಿಸದಂತೆ ಕ್ರಮ ವಹಿಸಬೇಕು. ಬಸ್‌ಗಳ ನಿಲುಗಡೆಯಿಂದ ವಾಹನ ಸುಗಮ ಸಂಚಾರಕ್ಕೆ ತೊಂದರೆಯಾಗುವುದರ ಜೊತೆಗೆ ರಸ್ತೆ ಅಪಘಾತಗಳು ಆಗುವ ಸಾಧ್ಯತೆಗಳಿವೆ ಎಂದರು.

ರಸ್ತೆಯ ಬದಿಯ ಖಾಲಿ ಸ್ಥಳಗಳಲ್ಲಿ ಗಿಡ ಮರಗಳನ್ನು ನೆಡಲು ಮಾರ್ಗಸೂಚಿಗಳನ್ನು ರಚಿಸಬೇಕು ಎಂದ ಅವರು, ರಸ್ತೆಯ ಇಕ್ಕೆಲಗಳಲ್ಲಿ ಅಪಾಯಕಾರಿ ಮರ ಹಾಗೂ ಮರದ ರೆಂಬೆಗಳನ್ನು ತೆರವುಗೊಳಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ, ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್, ಪ್ರಾದೇಶಿಕ ಸಾರಿಗೆ ಅಧಿಕಾರಿ ರವಿಶಂಕರ್, ಪೌರಾಯುಕ್ತ ರಾಯಪ್ಪ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಕ ಇಂಜಿನಿಯರ್ ದಿನೇಶ್ ಕೆ.ಎನ್, ರಾಷ್ಟ್ರೀಯ ಹೆದ್ದಾರಿ ಅಭಿಯಂತರ ಮಂಜುನಾಥ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.