ಉಡುಪಿ: ಸುಜನ ಟ್ರಸ್ಟ್ ಬಸಾಪುರದ ಪ್ರತಿಷ್ಠಿತ ಪ್ರದೀಪ ಪುರಸ್ಕಾರಕ್ಕೆ ಉಡುಪಿಯ ವೈಕುಂಠ ಬಾಳಿಗ ಕಾನೂನು ಮಹಾವಿದ್ಯಾಲಯದ ಮಾಜಿ ಪ್ರಾಂಶುಪಾಲ ಡಾ. ಪ್ರಕಾಶ್ ಕಣಿವೆ ಆಯ್ಕೆಯಾಗಿದ್ದಾರೆ. ಫೆಬ್ರವರಿ 20ರಂದು ಕೊಪ್ಪ ತಾಲೂಕಿನ ಬಿಲಗದ್ದೆ ಶಾಲಾ ಮೈದಾನದಲ್ಲಿ ಪ್ರದೀಪ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ.
ಮೂಲತಃ ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಕಣಿವೆ ಗ್ರಾಮದ ಡಾ. ಪ್ರಕಾಶ್ ಅವರು ಎರಡು ರಾಜ್ಯಗಳಲ್ಲಿ ಅಪಾರ ಶಿಷ್ಯರನ್ನು ಹೊಂದಿದ್ದಾರೆ. ಹಳ್ಳಿ ಶಿಕ್ಷಣವನ್ನು ಪಡೆದು ಶಿವಮೊಗ್ಗ ನ್ಯಾಷನಲ್ ಕಾಲೇಜಿನಲ್ಲಿ ಕಾನೂನು ಪದವಿಯನ್ನು ಪಡೆದು, ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಕಾನೂನು ಸ್ನಾತಕೋತ್ತರ ಪದವಿಯನ್ನು ಡಾ. ಪ್ರಕಾಶ್ ಕಣಿವೆಯವರು ಪಡೆದು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ.
ಕಣಿವೆ ಮಂಗಳೂರು ವಿಶ್ವವಿದ್ಯಾಲಯ ಮತ್ತು ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಪರೀಕ್ಷಾ ಮಂಡಳಿಯ ಅಧ್ಯಕ್ಷರಾಗಿ ಹದಿನೈದು ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿದ್ದಾರೆ. ರಾಜ್ಯ ಮಟ್ಟದ ಪರೀಕ್ಷೆಗಳು ಮೌಲ್ಯಮಾಪನದ ಮುಖ್ಯಸ್ಥರಾಗಿ ಆರು ಬಾರಿ ಕಾರ್ಯನಿರ್ವಹಿಸಿದ ಅನುಭವ ಅವರಿಗೆ ಇದೆ ಎಂದು ಟ್ರಸ್ಟ್ ಸಂಚಾಲಕ ಸುಧೀರ್ ಕುಮಾರ್ ಮರೋಳಿ ಉಡುಪಿಯಲ್ಲಿ ಮಾಹಿತಿ ನೀಡಿದರು.
ನ್ಯೂಯಾರ್ಕ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ಪಿಎಚ್ ಡಿ ಪದವಿ ಕೈಗೊಂಡು ಸಂಶೋಧನ ಕ್ಷೇತ್ರದಲ್ಲಿ ಅಮೆರಿಕಾದಲ್ಲಿ ವಿಜ್ಞಾನಿಯಾಗಿದ್ದ ಪ್ರದೀಪ್ ಅವರ ಹೆಸರಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಪ್ರಶಸ್ತಿಯನ್ನು ಅವರ ಗೆಳೆಯರ ಬಳಗ ನೀಡುತ್ತಾ ಬಂದಿದೆ.
ಮಾಜಿ ಸಭಾಪತಿ ಮಾಜಿ ಸಚಿವ ರಮೇಶ್ ಕುಮಾರ್ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಇದರ ಅಧ್ಯಕ್ಷ ಶ್ರೀನಿವಾಸ ಬಾಬು, ಡಾ. ನರೇಂದ್ರ ರೈ ದೇರ್ಲ, ಸುಜನಾ ಪ್ರತಿಷ್ಠಾನ ಪ್ರಧಾನ ಸಂಚಾಲಕ ಎಂ. ಆರ್
ಸುರೇಶ್, ಮೀನುಗಾರಿಕಾ ಇಲಾಖೆಯ ನಿವೃತ್ತ ನಿರ್ದೇಶಕ ಡಾ.ಎನ್.ಆರ್ ರಾಮಕೃಷ್ಣ, ಎನ್ ಆರ್ ಪುರ ವಕೀಲರ ಸಂಘದ ಅಧ್ಯಕ್ಷ ದಿವಾಕರ, ವಕೀಲರ ಸಂಘ ಕೊಪ್ಪದ ಅಧ್ಯಕ್ಷ ಶ್ರೀಕಾಂತ್, ಶೃಂಗೇರಿ ಅಧ್ಯಕ್ಷ ಜಿಎಂ ಸತೀಶ್, ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕ ರಾಜೇಗೌಡ ಭಾಗವಹಿಸಲಿದ್ದಾರೆ. ತೆನೆ ಕೊಪ್ಪ ಮತ್ತು ಸ್ನೇಹ ಶೃಂಗ ಬೆಂಗಳೂರು ಸಂಸ್ಥೆಗಳು ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮಕ್ಕೆ ಕೈಜೋಡಿಸಿದೆ.