ಸಚಿವ ಸಂಪುಟ ವಿಸ್ತರಣೆಗೆ ಶಾಸಕರ ಒತ್ತಡ

ಬೆಂಗಳೂರು: ಉಪಚುನಾವಣೆ ಮುಗಿಯುತ್ತಿದ್ದಂತೆ ಸಚಿವ ಸಂಪುಟ ವಿಸ್ತರಣೆ ಕೂಗು ಜೋರಾಗಿ ಕೇಳಿಬರುತ್ತಿದೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸಚಿವ ಸಂಪುಟ ವಿಸ್ತರಣೆಯ ಸುಳಿವು ನೀಡುತ್ತಿದ್ದಂತೆ ಅವರನ್ನು ಭೇಟಿ ಮಾಡಿ, ಒತ್ತಡ ಹೇರುವ ಶಾಸಕರ ಸಂಖ್ಯೆಯೂ ಹೆಚ್ಚಾಗಿದೆ.

ಬುಧವಾರ ಬೆಳಿಗ್ಗೆ ಸುಮಾರು ಆರಕ್ಕೂ ಹೆಚ್ಚು ಶಾಸಕರು ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತನಾಡಿದ್ದಾರೆ. ಅದಕ್ಕೆ ಮುನ್ನ ಈ ಶಾಸಕರು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿಯನ್ನು ಭೇಟಿ ಮಾಡಿ ಈ ಸಂಬಂಧ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ಶಾಸಕರಾದ ಮುರುಗೇಶ ನಿರಾಣಿ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ವಿಧಾನಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌, ಶಾಸಕಿ ಪೂರ್ಣಿಮಾ ಶ್ರೀನಿವಾಸ್‌, ಸಚಿವೆ ಶಶಿಕಲಾ ಜೊಲ್ಲೆ ಮುಂತಾದವರು ರಮೇಶ ಜಾರಕಿಹೊಳಿ ಅವರ ಜತೆ ಮಾತುಕತೆ ನಡೆಸಿದ್ದಾರೆ.
ಈ ಬಗ್ಗೆ ಮಾತನಾಡಿದ ಸುರಪುರ ಶಾಸಕ ರಾಜುಗೌಡ, ನಾವು ಸಿಎಂ ಬಳಿ ಆಕಾಂಕ್ಷೆಯನ್ನು ತೋಡಿಕೊಂಡಿದ್ದೇವೆ. ಆದರೆ ಯಾವುದೇ ಕಾರಣಕ್ಕೂ ಸಚಿವ ಸ್ಥಾನಕ್ಕಾಗಿ ಅವರ ಮೇಲೆ ಒತ್ತಡ ಹಾಕುವುದಿಲ್ಲ ಎಂದರು.

ವಿಧಾನ ಪರಿಷತ್ ಸದಸ್ಯ ಎಚ್‌.ವಿಶ್ವನಾಥ್‌ ಮಾತನಾಡಿ, ‘ಮುಂದಿನ ಸಾರ್ವತ್ರಿಕ ಚುನಾವಣೆಗೆ ತಯಾರಿ ನಡೆಸಲು ಸಚಿವ ಸಂಪುಟ ಪುನಾರಚನೆ ಮಾಡುವುದೇ ಸೂಕ್ತ ಎಂಬ ಅಭಿಪ್ರಾಯಪಟ್ಟಿದ್ದಾರೆ.