ರಾಷ್ಟ್ರಪತಿ ಆಗಮನ: ಅಲ್ಲಲ್ಲಿ ರಸ್ತೆ ಬಂದ್ ನಿಂದ ಪರದಾಡಿದ ಸಾರ್ವಜನಿಕರು

ಉಡುಪಿ: ರಾಷ್ಟ್ರಪತಿ ರಾಮನಾಥ ಕೋವಿಂದ್ ಇಂದು ಉಡುಪಿ ಶ್ರೀಕೃಷ್ಣಮಠಕ್ಕೆ ಭೇಟಿ ನೀಡುವ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಸಂಚರಿಸುವ ಮಾರ್ಗ ಹಾಗೂ ಸಂಪರ್ಕ ರಸ್ತೆಗಳನ್ನು ಬೆಳಗ್ಗೆ 9 ಗಂಟೆಯಿಂದಲೇ ಸಂಪೂರ್ಣ ಬಂದ್ ಮಾಡಲಾಗಿತ್ತು. ಇದರಿಂದ ಜನಸಾಮಾನ್ಯರು ಬಹಳ ತೊಂದರೆ ಅನುಭವಿಸಿದರು.
ಪರದಾಡಿದ ಮದುಮಗ:
ರಥಬೀದಿಯ ರಾಘವೇಂದ್ರ ಮಠದಲ್ಲಿ ಮೊದಲೇ ನಿಗದಿ ಮಾಡಿದ್ದ ಮದುವೆಗೆ ತೆರಳುತ್ತಿದ್ದ ಮದುವೆ ಗಂಡು ಹಾಗೂ ಆತನ ಸಂಬಂಧಿಕರನ್ನು ಪೊಲೀಸರು ತಡೆದು ನಿಲ್ಲಿಸಿದ ಘಟನೆಯೊಂದು ಕಲ್ಸಂಕದಲ್ಲಿ ಇಂದು ನಡೆದಿದೆ. ಮುಹೂರ್ತಕ್ಕೆ ತಡವಾಗುತ್ತಿದೆಯೆಂದು ಅಂಗಲಾಚಿದ ಬಳಿಕ ಮದುವೆ ಗಂಡು ಹಾಗೂ ಆತನ ಸಂಬಂಧಿಕರನ್ನು ಹೋಗಲು ಬಿಟ್ಟರು.
ಆದಿಉಡುಪಿ ಹೆಲಿಪ್ಯಾಡ್ ನಿಂದ ಶ್ರೀಕೃಷ್ಣಮಠಕ್ಕೆ ಬರುವ ಮಾರ್ಗದಲ್ಲಿ ಸಾರ್ವಜನಿಕರ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಇದರಿಂದ ಬೆಳಗ್ಗೆ ಉದ್ಯೋಗಗಳಿಗೆ ತೆರಳುವ ಮಂದಿ, ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ತೊಂದರೆ ಅನುಭವಿಸಿದರು. ಕೆಲ ವಾಹನ ಸವಾರರು ಪೊಲೀಸರೊಂದಿಗೆ ವಾಗ್ವಾದ ಮಾಡುತ್ತಿದ್ದ ದೃಶ್ಯಗಳು ಅಲ್ಲಲ್ಲಿ ಕಂಡುಬಂದವು.
ಟ್ರಾಫಿಕ್ ನಿಭಾಯಿಸುವಲ್ಲಿ ಪೊಲೀಸರ ವೈಫಲ್ಯ: 
ಕಳೆದ ಬಾರಿ ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆಗಮಿಸುವ ಸಂದರ್ಭದಲ್ಲಿ ಸಾರ್ವಜನಿಕರು ಇಷ್ಟೊಂದು ಸಮಸ್ಯೆಗಳನ್ನು ಎದುರಿಸಿರಲಿಲ್ಲ. ಈ ಬಾರಿ ರಾಷ್ಟ್ರಪತಿ ಗಳು ಬರುವುದಕ್ಕೂ ಮೂರು ಗಂಟೆಯ ಮೊದಲೇ ರಸ್ತೆ ಸಂಚಾರವನ್ನು ಬಂದ್ ಮಾಡಿದರು. ಇದರಿಂದ ಸಾರ್ವಜನಿಕರು ತುಂಬಾ ಸಮಸ್ಯೆ ಎದುರಿಸಬೇಕಾಯಿತು. ಪೊಲೀಸರು ಸರಿಯಾಗಿ ಟ್ರಾಫಿಕ್ ನಿಭಾಯಿಸಿದ್ದರೆ ಇಷ್ಟೊಂದು ಸಮಸ್ಯೆ ಆಗುತ್ತಿರಲಿಲ್ಲ ಎನ್ನುತ್ತಾರೆ ಸಾರ್ವಜನಿಕರು.