ಉಡುಪಿ: ಕೋವಿಡ್ ಸೋಂಕಿನ ರೂಪಾಂತರ ವೈರಸ್ ಆದ ಓಮಿಕ್ರಾನ್ ಹರಡುವ ಸಾಧ್ಯತೆಯಿರುವ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಈ ಹಿಂದೆ ಕೋವಿಡ್ ಅಲೆಗಳನ್ನು ನಿಯಂತ್ರಿಸಲು ರಚಿಸಿರುವ ಸಮಿತಿಗಳನ್ನು ಪುನಾರಾರಂಭಿಸಿ, ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಲು ಸನ್ನದ್ಧರಾಗಿರುವಂತೆ ಜಿಲ್ಲಾಧಿಕಾರಿ ಕೂರ್ಮರಾವ್ ಎಂ ಹೇಳಿದರು.
ಅವರು ಬುಧವಾರ ಸಂಜೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ, ಜಿಲ್ಲೆಯಲ್ಲಿ ಓಮಿಕ್ರನ್ ವೈರಸ್ ನಿಯಂತ್ರಣ ಕುರಿತು ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ನಡೆದ ವರ್ಚುವಲ್ ಮೀಟಿಂಗ್‌ನ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈಗಾಗಲೇ ವಿಶ್ವದ 11 ದೇಶಗಳಲ್ಲಿ ಹೊಸ ರೂಪಾಂತರಿ ತಳಿಯಾದ ಓಮಿಕ್ರಾನ್ ವ್ಯಾಪಕವಾಗಿ ಹರಡಿದ್ದು, ವಿದೇಶಿ ಪ್ರಯಾಣಿಕರಿಂದ ರಾಜ್ಯದಲ್ಲಿ ಸಹ ಹರಡುವ ಸಾಧ್ಯತೆಗಳಿದ್ದು, ಹೊಸ ತಳಿಯು ಹರಡುವ ವೇಗವು ಹೆಚ್ಚಿರುವ ಹಿನ್ನಲೆ, ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸುವುದು ಅವಶ್ಯವಾಗಿದೆ ಎಂದರು.
ಓಮಿಕ್ರಾನ್ ದೃಢಪಟ್ಟ ರಾಷ್ಟ್ರಗಳಿಂದ ಜಿಲ್ಲೆಗೆ ಆಗಮಿಸುವ ಪ್ರಯಾಣಿಕರನ್ನು ತಪ್ಪದೇ ಪರೀಕ್ಷೆಗೆ ಒಳಪಡಿಸಬೇಕು. ಒಂದೊಮ್ಮೆ ಅವರ ಪರೀಕ್ಷಾ ವರದಿಯು ನೆಗೆಟಿವ್ ಬಂದಲ್ಲಿ ಅವರನ್ನು 7 ದಿನಗಳ ಹೋಂ ಕ್ವಾರಂಟೈನ್ ಮಾಡಬೇಕು. ಪಾಸಿಟಿವ್ ಬಂದಲ್ಲಿ ಅವರುಗಳನ್ನು 14 ದಿನಗಳ ಕಾಲ ಸಾಂಸ್ಥಿಕ ಐಸೋಲೇಶನ್/ಆಸ್ಪತ್ರೆಗೆ ದಾಖಲಿಸಬೇಕು ಎಂದ ಅವರು, ಕಳೆದ 15 ದಿನಗಳಿಂದ ಜಿಲ್ಲೆಗೆ ವಿದೇಶದಿಂದ ಬಂದಿರುವವರ ಮಾಹಿತಿಗಳನ್ನು, ಮಂಗಳೂರು ಹಾಗೂ ಬೆಂಗಳೂರು ವಿಮಾನ ನಿಲ್ಧಾಣಗಳಿಂದ ಪಡೆದು, ಅವರುಗಳನ್ನು ಪರೀಕ್ಷೆಗೆ ಒಳಪಡಿಸಬೇಕು ಎಂದರು.
ಜನ ಸಾಮಾನ್ಯರು ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಕಾಪಾಡುವುದು, ಕೈ ತೊಳೆಯುವುದು ಸೇರಿದಂತೆ ಕೋವಿಡ್‌ನ ಸರಳ ಮಾರ್ಗಸೂಚಿಗಳನ್ನು ತಪ್ಪದೇ ಪಾಲನೆ ಮಾಡಬೇಕು. ತಮ್ಮ ನೆರೆ ಹೊರೆಯವರು ವಿದೇಶದಿಂದ ಬಂದಿದ್ದಲ್ಲಿ ಅವರ ಮಾಹಿತಿಗಳನ್ನು ಜಿಲ್ಲಾಡಳಿತಕ್ಕೆ ತಿಳಿಸಬೇಕು ಎಂದರು.
ಮುಂದಿನ ದಿನಗಳಲ್ಲಿ ಸೋಂಕು ಹೆಚ್ಚಾದಲ್ಲಿ ಅವುಗಳ ನಿರ್ವಹಣೆಗೆ ಅಗತ್ಯವಿರುವ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಅಧಿಕಾರಿಗಳು ಕೈಗೊಳ್ಳಬೇಕು. ಕೋವಿಡ್ ಕೇರ್ ಸೆಂಟರ್ ಗಳನ್ನು ತೆರೆಯಲು ಸ್ಥಳಗಳನ್ನು ಗುರುತಿಸಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಚಿಕಿತ್ಸೆಗೆ ಬೆಡ್‌ಗಳ ಕೊರತೆಯಾಗದಂತೆ ಮಾಹಿತಿಗಳನ್ನು ಹಾಗೂ ಬೆಡ್ ಲಭ್ಯತೆಗಳ ಬಗ್ಗೆ ಈಗಲೇ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ, ಪರಿಶೀಲಿಸಿ ಆಕ್ಸಿಜನ್ ಸಹಿತಿ / ರಹಿತ, ಐಸಿಯು ಬೆಡ್‌ಗಳು ಹಾಗೂ ಅವುಗಳ ನಿರ್ವಹಣಾ ಮಾಹಿತಿಯನ್ನು ಸಂಬಂಧಿಸಿದ ಸಮಿತಿಯವರು ಸಂಗ್ರಹಿಸಿಟ್ಟುಕೊಳ್ಳಬೇಕು ಎಂದರು.
ಕೋವಿಡ್ ಪರೀಕ್ಷಾ ನಿರ್ವಹಣಾ ಸಮಿತಿಯು ಪ್ರತಿದಿನ ಕೋವಿಡ್ ಪರೀಕ್ಷೆಯ ಸ್ವಾö್ಯಬ್ ಸಂಗ್ರಹವನ್ನು ಅದೇ ದಿನ ಮಧ್ಯಾಹ್ನ ಹಾಗೂ ಸಂಜೆ 2 ಪಾಳಿಯಲ್ಲಿ ಟೆಸ್ಟಿಂಗ್ ಸೆಂಟರ್‌ಗಳಿಗೆ ರವಾನಿಸಿ, ಅಂದಿನ ದಿನದ ಪರೀಕ್ಷೆಯ ವರದಿಯುನ್ನು ಅಂದೇ ನೀಡುವಂತೆ ಕಾರ್ಯಪ್ರವೃತ್ತರಾಗಬೇಕು ಎಂದರು.
ಕೋವಿಡ್ ಕಂಟ್ರೋಲ್ ರೂಂ ಕಳೆದ 2 ಅಲೆಗಳಲ್ಲಿ ಯಶಸ್ವಿಯಾಗಿ ನಿರ್ವಹಿಸಿದ್ದು, ಅದನ್ನು ಪುನರ್ ಕಾರ್ಯಾರಂಭಿಸಿ, ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕು. ಯಾವುದೇ ಜಟಿಲ ಸಮಸ್ಯೆಗಳು ಬಂದಲ್ಲಿ ಜಿಲ್ಲಾಡಳಿತದ ಗಮನಕ್ಕೆ ತರಬೇಕು ಎಂದರು.
ಮನೆ ಸೀಲ್ ಡೌನ್:
3 ಮತ್ತು 4 ಕ್ಕಿಂತ ಹೆಚ್ಚು ಕೋವಿಡ್ ಪ್ರಕರಣಗಳು ಕಂಡು ಬಂದಲ್ಲಿ ಕೂಡಲೇ ಆ ಪ್ರದೇಶವನ್ನು ಮೈಕ್ರೋ ಕಂಟೈನ್ಮೆಂಟ್ ವಲಯ ಎಂದು ಘೋಷಿಸಬೇಕು. ಒಂದೇ ಪ್ರಕರಣ ಕಂಡುಬಂದಲ್ಲಿ ಆ ಮನೆಯನು ಸೀಲ್‌ಡೌನ್ ಮಾಡಬೇಕು ಎಂದು ಸೂಚನೆ ನೀಡಿದರು.
ಕೆ.ಪಿ.ಎಂ.ಇ ಅಡಿಯಲ್ಲಿ ನೊಂದಾಯಿಸಿರುವ ಕ್ಲಿನಿಕ್‌ನ ವೈದ್ಯರು ಹಾಗೂ ಎಲ್ಲಾ ಔಷದ ಮಾರಾಟಗಾರರು, ಶೀತ ಕೆಮ್ಮು ಜ್ವರಕ್ಕೆ ಚಿಕಿತ್ಸೆ ಹಾಗೂ ಔಷಧಗಳನ್ನು ಖರೀದಿಸುವವರ ಮಾಹಿತಿಯನ್ನು ತಪ್ಪದೆ ಪಡೆಯಬೇಕು. ಮಾಹಿತಿ ನೀಡದ ಮಾರಾಟಗಾರರಿಗೆ ದಂಡ ವಿಧಿಸಬೇಕು. ಈ ಬಗ್ಗೆ ನಿರಂತರವಾಗಿ ಫಾಲೋ ಅಪ್ ನಡೆಸುವಂತೆ ಸೂಚಿಸಿದರು.
ತೀವ್ರ ನಿಗಾ ಘಟಕಗಳಲ್ಲಿ ಚಿಕಿತ್ಸೆ ಪಡೆಯುವವರಿಗೆ ಪ್ರಾಣವಾಯುವಿನ ಕೊರತೆಯಾಗದಂತೆ ಹಾಲಿ ಇರುವುದÀಕ್ಕಿಂತ ಹೆಚ್ಚುವರಿಯಾಗಿ ಆಕ್ಸಿಜಿನ್ ಸಂಗ್ರಹಿಸಲು ಸಿಲೆಂಡರ್‌ಗಳು ಹಾಗೂ ಸಂಗ್ರಹಾಗಾರವನ್ನು ಹೆಚ್ಚಿಸಬೇಕು ಹಾಗೂ ಅಕ್ಸಿಜಿನ್ ಕಾನ್ಸ್ಸನ್ ಟ್ರೇಟÀರ್‌ಗಳು ಹೆಚ್ಚು ಲಭ್ಯವಿರುವಂತೆ ನೋಡಿಕೊಳ್ಳಬೇಕು ಎಂದರು.
ಜಿಲ್ಲೆಯ ಎಲ್ಲಾ ಚೆಕ್‌ಪೋಸ್ಟ್ಗಳಲ್ಲಿ ಪೊಲೀಸರೊಂದಿಗೆ ಇತರೆ ಇಲಾಖೆಯ ಅಧಿಕಾರಿಗಳನ್ನು ನಿಯೋಜಿಸುವುದರೊಂದಿಗೆ ನಿರಂತರ ಪರಿಶೀಲನೆ ಕೈಗೊಳ್ಳಬೇಕು ಎಂದ ಅವರು, ಅಂಗಡಿ ಮುಂಗಟ್ಟುಗಳನ್ನು ನಡೆಸುವ ಎಲ್ಲಾ ಮಾಲೀಕರು ಮತ್ತು ಸಿಬ್ಬಂದಿಗಳು ಕೋವಿಡ್ ಮಾರ್ಗಸೂಚಿಗಳನ್ನು ತಪ್ಪದೇ ಪಾಲನೆ ಮಾಡುವಂತೆ ಸ್ಥಳೀಯ ಸಂಸ್ಥೆಗಳು ಎಚ್ಚರವಹಿಸಬೇಕು. ಉಲ್ಲಂಘಿಸಿದಲ್ಲಿ ತಪ್ಪದೇ ದಂಡ ವಿಧಿಸಬೇಕು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ಮಾತನಾಡಿ, ಈಗಾಗಲೇ ಜಿಲ್ಲೆಯಲ್ಲಿ ಮೊದಲನೇ ಮತ್ತು 2ನೇ ಅಲೆಯಲ್ಲಿ ಅಧಿಕಾರಿಗಳನ್ನು ಒಳಗೊಂಡ ಸಮಿತಿಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸಿವೆ. ಮುಂಬರುವ ಅಲೆಯನ್ನು ಎದುರಿಸಲು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಲು ಸನ್ನದ್ಧರಾಗಿರುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಾಲಕೃಷ್ಣಪ್ಪ, ಕುಂದಾಪುರ ಉಪವಿಭಾಗಾಧಿಕಾರಿ ರಾಜು, ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯ್ಕ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಮರಾವ್, ಕೋವಿಡ್ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ಮತ್ತು ಇತರೆ ಜಿಲ್ಲಾಮಟ್ಟದ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.