ಉಡುಪಿ: ಕಾರ್ಕಳದ ಗೊಮ್ಮಟೇಶ್ವರ ಬೆಟ್ಟದಲ್ಲಿ ಕ್ರಿ.ಶ.1432ರಲ್ಲಿ ಪ್ರತಿಷ್ಠಾಪನೆಗೊಂಡಿರುವ ಭಗವಾನ್ ಶ್ರೀಬಾಹುಬಲಿ ಮೂರ್ತಿಗೆ ಪ್ರತಿ 12 ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ ನಡೆಯಲಿದ್ದು, ಮುಂದಿನ ಕಾರ್ಯಕ್ರಮ 2027ರ ಫೆಬ್ರವರಿ ತಿಂಗಳಲ್ಲಿ ನಡೆಯಲಿದೆ. ಇದಕ್ಕಾಗಿ ಎಲ್ಲಾ ಪೂರ್ವಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎಂದು ಮಹಾಮಸ್ತಕಾಭಿಶೇಕ ಸಮಿತಿಯ ಕಾರ್ಯಾಧ್ಯಕ್ಷ ಡಾ.ಎಂ.ಎನ್.ರಾಜೇಂದ್ರಕುಮಾರ್ ತಿಳಿಸಿದ್ದಾರೆ.
ಕಾರ್ಕಳದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾಮಸ್ತಕಾಭಿಷೇಕ ಸಮಿತಿಯ ಕಾರ್ಯಾಲಯದ ಉದ್ಘಾಟನೆ ಮತ್ತು ಮಹಾಮಸ್ತಕಾಭಿಷೇಕದ ದಿನಾಂಕ ಘೋಷಣೆಯ ಕಾರ್ಯಕ್ರಮ ಎ.19ರಂದು ಬೆಳಿಗ್ಗೆ 10:30ಕ್ಕೆ ಕಾರ್ಕಳದ ದಾನಶಾಲೆ ಭಗವಾನ್ ಶ್ರೀ ಬಾಹುಬಲಿ ಪ್ರವಚನ ಮಂದಿರದಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಜೈನಾಗಮ ಪದ್ಧತಿಯಂತೆ ಪರಂಪರಾನುಗತ ಮಹಾಮಸ್ತಕಾಭಿಷೇಕವನ್ನು ಈ ಬಾರಿ 2027ರ ಫೆಬ್ರವರಿ ತಿಂಗಳಲ್ಲಿ 10 ದಿನಗಳ ಕಾಲ ವೈಭವದಿಂದ ನಡೆಸಲು ಯೋಜನೆಗಳನ್ನು ರೂಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇದೇ ಎ.19ರಂದು ಕಾರ್ಕಳ ದಾನಶಾಲೆ ಶ್ರೀಜೈನ ಮಠದ ಪರಮಪೂಜ್ಯ ರಾಜಗುರು ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಮಹಾಮಸ್ತಕಾಭಿಷೇಕ ಸಮಿತಿಯ ಅಧ್ಯಕ್ಷರಾದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು 2027ರ ಮಹಾ ಮಸ್ತಕಾಭಿಷೇಕದ ದಿನಾಂಕ ಘೋಷಣೆ ಮಾಡಲಿದ್ದಾರೆ.
ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಶೇಷಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಅವರು ಮಹಾಮಸ್ತಕಾಭಿಷೇಕ ಸಮಿತಿಯ ಕಾರ್ಯಾಲಯವನ್ನು ಉದ್ಘಾಟಿಸುವರು ಎಂದು ಅವರು ವಿವರಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಯೋಜನಾ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖಿಕ ಇಲಾಖಾ ಸಚಿವ ಹಾಗೂ ಮಹಾಮಸ್ತಕಾಭಿಷೇಕ ಸಮಿತಿಯ ಗೌರವ ಸಂರಕ್ಷಕ ಡಿ. ಸುಧಾಕರ್ ಸಭಾ ಕಾರ್ಯಕ್ರಮದ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ ಬೆಂಗಳೂರು ಇದರ ಅಧ್ಯಕ್ಷರು ಹಾಗೂ ಮಹಾಮಸ್ತಕಾಭಿಷೇಕ ಸಮಿತಿಯ ಕಾರ್ಯಾಧ್ಯಕ್ಷ ಡಾ.ರಾಜೇಂದ್ರ ಕುಮಾರ್ ವಹಿಸಲಿರುವರು.
ಮುಖ್ಯ ಅತಿಥಿಗಳಾಗಿ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್, ಕರ್ನಾಟಕ ಅದಾನಿ ಗ್ರೂಪ್ನ ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು ಅಧ್ಯಕ್ಷ ಕಿಶೋರ್ ಅಳ್ವ, ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಮಾಜಿ ಸಚಿವ, ಸಮಿತಿಯ ಉಪಾಧ್ಯಕ್ಷ ಕೆ. ಅಭಯಚಂದ್ರ ಜೈನ್ ಹಾಗೂ ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ನ ಆಡಳಿತ ಟ್ರಸ್ಟಿ ಉದಯ ಕುಮಾರ್ ಶೆಟ್ಟಿ ಮುನಿಯಾಲು ಭಾಗವಹಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕಾರ್ಕಳ ಜೈನಮಠದ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾ ಸ್ವಾಮೀಜಿ, ಸಮಿತಿ ಕಾರ್ಯದರ್ಶಿ ಪುಷ್ಪರಾಜ್ ಜೈನ್, ಕೋಶಾಧಿಕಾರಿ ಎ ಮೋಹನ್ ಪಡಿವಾಳ್, ಪ್ರಭಾತ್ ಕುಮಾರ್, ಅನಂತರಾಜ ಪೂವಣಿ, ಸಂಪತ್ ಸಾಮ್ರಾಜ್ಯ, ಸುಧೀರ್ ಪಡಿವಾಳ್, ಕೆ ಜಯಕೀರ್ತಿ ಕಡಂಬ, ಹೇಮಚಂದ್ರ ಜೈನ್, ಸುನಿಲ್ ಕುಮಾರ್ ಬಜಗೋಳಿ, ಮಹಾವೀರ ಹೆಗ್ಡೆ, ಭರತ್ ಕುಮಾರ್ ಜೈನ್, ಶೀತಲ್ ಜೈನ್, ಸುಭಾಶ್ಚಂದ್ರ ಚೌಟ, ಶಾಂತಿರಾಜ ಜೈನ್, ಮಹೇಂದ್ರ ವರ್ಮ ಜೈನ್, ಶಿಶುಪಾಲ ಜೈನ್ ಹಾಗೂ ಇತರರು ಉಪಸ್ಥಿತರಿದ್ದರು.
82.37 ಕೋಟಿ ರೂ.ನೆರವಿಗೆ ಸರಕಾರಕ್ಕೆ ಮನವಿ:
ಡಾ.ಎಂಎನ್ಆರ್10 ದಿನಗಳ ಕಾಲ ಅತ್ಯಂತ ವೈಭವದಿಂದ ನಡೆಯಲಿರುವ ಮಹಾಮಸ್ತಕಾಭಿಷೇಕ ಮಹೋತ್ಸವದ ಸಂದರ್ಭದಲ್ಲಿ ದೇಶ-ವಿದೇಶಗಿಂದ ಲಕ್ಷಾಂತರ ಮಂದಿಭಕ್ತರು ಹಾಗೂ ಪ್ರವಾಸಿಗರು ಕಾರ್ಕಳಕ್ಕೆ ಆಗಮಿಸಲಿದ್ದಾರೆ. ಇವರಿಗಾಗಿ ಕಾರ್ಕಳದಲ್ಲಿ ಸಮಗ್ರ ಮೂಲಭೂತ ಸೌಕರ್ಯ ಸೇರಿದಂತೆ ಎಲ್ಲಾ ವ್ಯವಸ್ಥೆಯನ್ನು ಒದಗಿಸಲು ಸರಕಾರದ ವಿವಿಧ ಇಲಾಖೆಗಳ ಮೂಲಕ ನಡೆಯಬೇಕಾದ ಅಭಿವೃದ್ಧಿ ಕಾರ್ಯಕ್ರಮಗಳ ಕ್ರಿಯಾಯೋಜನೆ ಸಿದ್ಧಪಡಿಸಿ ಸರಕಾರಕ್ಕೆ ಒಟ್ಟು 82.37 ಕೋಟಿ ರೂ.ಗಳ ಅನುದಾನದ ಮನವಿಯನ್ನು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗಿದೆ ಎಂದು ಡಾ.ಎಂ.ಎನ್.ರಾಜೇಂದ್ರಕುಮಾರ್ ತಿಳಿಸಿದರು.

















