ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದ ಪೊಲೀಸರು, ಎರಡು ಪ್ರತ್ಯೇಕ ಧರಣಿನಿರತ ಗುಂಪುಗಳ ನಡುವೆ ಮಾತಿನ ಚಕಮಕಿ

ಉಡುಪಿ: ಜಿಲ್ಲಾಧಿಕಾರಿ ಕಚೇರಿಯ ಎದುರು ಇಂದು ಎರಡು ಪ್ರತ್ಯೇಕ ಪ್ರತಿಭಟನೆಗಳು ನಡೆದಿದ್ದು, ಇದು ಪ್ರತಿಭಟನಾಕಾರರು ನಡುವೆ ಮಾತಿನ ಸಮರಕ್ಕೂ ವೇದಿಕೆಯಾಯಿತು. ಮರಳು ಸಮಿತಿ ನಡೆಸುತ್ತಿರುವ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದರೆ, ಅವರ ಪ್ರತಿಭಟನೆಯ ಪಕ್ಕದಲ್ಲೇ ಮರಳು ಪರವಾನಗಿಗೆ ಆಗ್ರಹಿಸಿ ಉಡುಪಿ ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪಂಗಡದ ಹೊಯ್ಗೆ ದೋಣಿ ಕಾರ್ಮಿಕರ ಸಂಘದ ವತಿಯಿಂದ ಧರಣಿ ನಡೆಯುತ್ತಿತ್ತು.
ಈ ವೇಳೆ ಬಿಜೆಪಿ ನಗರಸಭೆ ಸದಸ್ಯರೊಬ್ಬರು ಕಾರನ್ನು ತಂದು ಪ್ರತಿಭಟನೆ ಮಾಡುವ ಸ್ಥಳದ
ಮುಂದೆ ನಿಲ್ಲಿಸಿದರು. ಆಗ ಕಾರ್ಮಿಕ ಸಂಘದ ಪದಾಧಿಕಾರಿಗಳು ಕಾರು ತೆಗೆಯುವಂತೆ ಪೊಲೀಸರಿಗೆ ಸೂಚಿಸಿದರು.
ಆಗ ಆ ನಗರಸಭೆ ಸದಸ್ಯನೊಂದಿಗೆ ಬಂದ ಬಿಜೆಪಿ ಕಾರ್ಯಕರ್ತರು ಹಾಗೂ ಮರಳು ಹೋರಾಟಗಾರು ಅವರಿಗೆ ಯಾರು ಪ್ರತಿಭಟನೆ ಮಾಡಲು ಅವಕಾಶ ಕೊಟ್ಟದ್ದು ಎಂದು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದರು. ಈ ಮಧ್ಯೆ ಎರಡು ಪ್ರತಿಭಟನಾ ಗುಂಪುಗಳ ನಡುವೆ ಮಾತಿನಚಕಮಕಿ ನಡೆಯಿತು.
ನೀವು ಯಾರಿಗೆ ದಿಕ್ಕಾರ ಹಾಕುವುದು. ಶಾಸಕರಿಗೆ ದಿಕ್ಕಾರ ಹಾಕಿದರೆ ಜಾಗೃತೆ ಎಂದು ಪೊಲೀಸರ ಎದುರಿನಲ್ಲಿಯೇ ಧರಣಿನಿರತರಿಗೆ ಬೆದರಿಕೆ ಒಡ್ಡಿದರು. ನೀವು ಜಿಲ್ಲಾಧಿಕಾರಿಗೆ ಹೋಗಿ ದಿಕ್ಕಾರ ಕೂಗಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಪೊಲೀಸರು ಮಧ್ಯೆ ಪ್ರವೇಶಿಸಿ ಬಿಜೆಪಿ ಕಾರ್ಯಕರ್ತರನ್ನು ಸಮಾಧಾನ ಪಡಿಸಿದರು. ಹಾಗೆಯೇ ಕಾರ್ಮಿಕ ಸಂಘದ ಪದಾಧಿಕಾರಿಗಳು ಶಾಸಕರ ವಿರುದ್ಧ ದಿಕ್ಕಾರ ಹಾಕದಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಪ್ರತಿಭಟನಾ ಸ್ಥಳದಿಂದಲೇ ಕಾರ್ಯಕರ್ತರು ಹಾಗೂ ಹೋರಾಟಗಾರರನ್ನು ಸಮಾಧಾನ ಪಡಿಸಿದ ಶಾಸಕ ರಘುಪತಿ ಭಟ್‌ ಮಾತನಾಡಿ, ಯಾರು ತಾಳ್ಮೆ ಕಳೆದುಕೊಳ್ಳಬಾರದು. ಜಿಲ್ಲಾಡಳಿತದ ಷಡ್ಯಂತ್ರಕ್ಕೆ ನಾವು ಬಲಿಯಾದರೆ ನಾವೇ ಮೂರ್ಖರಾಗುತ್ತೇವೆ ಎಂದು ಹೋರಾಟಗಾರರಿಗೆ ಶಾಸಕರು ಕಿವಿಮಾತು ಹೇಳಿದರು. ಎಲ್ಲರೂ ಪ್ರತಿಭಟನಾ ಸ್ಥಳದಿಂದ ಹೊರಗೆ ಹೋಗಬೇಡಿ. ದಯವಿಟ್ಟು ಇಲ್ಲಿಗೆ ಬನ್ನಿ ಎಂದು ಮನವಿ ಮಾಡಿದರು.
ಇದು ಜಿಲ್ಲಾಡಳಿತದ ವ್ಯವಸ್ಥಿತ ಷಡ್ಯಂತ್ರ. ಇದಕ್ಕೆ ನಾವು ಬಲಿಯಾಗಬಾರದು. ನಾವು ಜಿಲ್ಲೆಯ ಜನತೆಗೆ ಮರಳು ಸಿಗುತ್ತಿಲ್ಲವೆಂದು ಹೋರಾಟ ಮಾಡುತ್ತಿದ್ದೇವೆ. ಆದರೆ ನಮ್ಮ ಹೋರಾಟದ ದಿಕ್ಕು ತಪ್ಪಿಸಲು ಜಿಲ್ಲಾಡಳಿತ ಉದ್ದೇಶ ಪೂರ್ವಕವಾಗಿ ಈ ರೀತಿ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯ ಮರಳಿನ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಿಂದ ನಾವು ಪಕ್ಷಾತೀತವಾದ ಹೋರಾಟ ಮಾಡುತ್ತಿದ್ದೇವೆ. ಅದನ್ನು ಹತ್ತಿಕ್ಕಲು ಜಿಲ್ಲಾಡಳಿತ ಸಂಚು ರೂಪಿಸಿದ್ದು, ನಮ್ಮನ್ನು ಪ್ರಚೋದನೆಗೊಳಿಸಿ ಸಂಘರ್ಷ ಉಂಟು ಮಾಡಲು ಯತ್ನಿಸುತ್ತಿದೆ. ಆ ಮೂಲಕ ಹೋರಾಟ ನಿಲ್ಲಿಸಲು ಯತ್ನಿಸುತ್ತಿದೆ. ಹಾಗಾಗಿ ಅವರು ಎಷ್ಟೇ ಘೋಷಣೆ ಹಾಕಿದರೂ ನಾವು ಕಿವಿಗೊಡಬಾರದು. ಅವರು ನಮ್ಮ ವಿರುದ್ಧ ಘೋಷಣೆ ಕೂಗುವುದರಿಂದ ಏನೂ ಆಗಲ್ಲ. ಇದರಿಂದ ನಾವು ವಿಚಲಿತಗೊಳ್ಳಲ್ಲ. ನಾವು ಮರಳು ಸಮಸ್ಯೆ ಪರಿಹಾರವಾಗುವವರೆಗೆ ಪ್ರತಿಭಟನಾ ಸ್ಥಳದಿಂದ ಕದಲುವುದಿಲ್ಲ ಎಂದರು. ನಮಗೆ ನ್ಯಾಯ ಸಿಗುವವರೆಗೂ ನಾವು ಹೋರಾಟ ಮಾಡುತ್ತೇವೆ. ಇಂದು ಗಣಿ ಮತ್ತು ಭೂ ವಿಜ್ಞಾನ ಸಚಿವರ ಜತೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಇದೆ. ಅಲ್ಲಿ ನಮ್ಮ ಹೋರಾಟಕ್ಕೆ ನ್ಯಾಯ ಸಿಗುತ್ತದೆ ಎಂಬ ಸಂಪೂರ್ಣ ವಿಶ್ವಾಸ ಇದೆ ಎಂದು ಹೇಳಿದರು.
ಒಂದು ವೇಳೆ ಸಚಿವರ ಜತೆಗಿನ ಸಭೆಯಲ್ಲೂ ನಮ್ಮ ಬೇಡಿಕೆ ಈಡೇರದಿದ್ದರೆ ಮುಂದಿನ
ದಿನಗಳಲ್ಲಿ ರಸ್ತೆ ತಡೆ, ಜಿಲ್ಲಾ ಬಂದ್‌ಗೆ ಕರೆಕೊಡುವ ಮೂಲಕ ನಾವು ಉಗ್ರ ಸ್ವರೂಪದ
ಪ್ರತಿಭಟನೆಗೆ ಇಳಿಯುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಸಚಿವರ ಜತೆಗಿನ ಸಭೆ ಸಫಲ: ಧರಣಿ ಅಂತ್ಯ
ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಗಣಿ ಮತ್ತು ಭೂ ವಿಜ್ಞಾನ ಸಚಿವರ ಜತೆಗಿನ
ಸಭೆ ಸಫಲಗೊಂಡಿದೆ. 171 ಮಂದಿಗೂ ಪರವಾನಗಿ ನೀಡುವ ಭರವಸೆ ಸಿಕ್ಕ ಹಿನ್ನೆಲೆಯಲ್ಲಿ
ಬಿಜೆಪಿ ನೇತೃತ್ವದಲ್ಲಿ ಮರಳು ಹೋರಾಟ ಸಮಿತಿ ಕೈಗೊಂಡಿದ್ದ ಪ್ರತಿಭಟನೆಯನ್ನು
ಹಿಂದಕ್ಕೆ ಪಡೆದುಕೊಳ್ಳಲಾಗಿದೆ.