ಶ್ರೀ ದೊಡ್ಡಮ್ಮದೇವಿ ಪ್ರಾಣ ಪ್ರತಿಷ್ಟಾಪನಾ ಮಹೋತ್ಸವ

ಚಿಕ್ಕಮಗಳೂರು: ಬುಧವಾರದಂದು ನಗರದ ದಂಟರಮಕ್ಕಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ದೊಡ್ಡಮ್ಮದೇವಿ ದೇವಾಲಯದ ಪ್ರವೇಶೋತ್ಸವ ಹಾಗೂ ಶಿಲಾಮೂರ್ತಿ ಪುನಃ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವವು ನೂರಾರು ಗ್ರಾಮಸ್ಥರೊಂದಿಗೆ ಶ್ರದ್ದಾಭಕ್ತಿಯಿಂದ ನಡೆಯಿತು.

ಮಹೋತ್ಸವವು ಎರಡು ದಿನಗಳಿಂದ ಆಚರಿಸಲಾಗುತ್ತಿದ್ದು ಕೊನೆಯ ದಿನವಾದ ಇಂದು ಬೆಳಿಗ್ಗೆ 4 ರಿಂದ ಶ್ರೀ ದೊಡ್ಡಮ್ಮದೇವಿ ಶಿಲಾವಿಗ್ರಹ ಮತ್ತು ಪರಿವಾರ ದೇವತೆಗಳ ಪುನಃ ಪ್ರಾಣ ಪ್ರತಿಷ್ಟಾಪನಾ ಅಭಿಷೇಕ, ಹೋಮಾದಿಗಳು ನಡೆಯಿತು. ಬೆಳಿಗ್ಗೆ 10 ರಿಂದ ಶ್ರೀ ಚಂದ್ರಶೇಖರ ಶಿವಾಚಾರ್ಯಸ್ವಾಮಿಗಳು ಶಿಖರ ಕಳಸಾರೋಹಣ ನೆರವೇರಿಸಿದರು. ಅದಾದ ಬಳಿಕ ಪೂರ್ಣಾಹುತಿ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಜರುಗಿತು.

ನಂತರ ಮಾತನಾಡಿದ ಅವರು ಗ್ರಾಮದಲ್ಲಿ ದೇವಿಯ ಆರಾಧನೆಯಿಂದ ದುಷ್ಟಶಕ್ತಿಗಳು ದೂರವಾಗಿ, ಶಾಂತಿ, ನೆಮ್ಮದಿ ಹಾಗೂ ಸಮೃದ್ದಿ ನೆಲೆಸಲು ಸಾಧ್ಯ. ಇಂತಹ ಧಾರ್ಮಿಕ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.

ದೇವಾಲಯದ ಅರ್ಚಕರಾದ ಲೋಕೇಶ್, ದಾಸೇಗೌಡರು ಹಾಗೂ ವಿಜಯಕುಮಾರ್ ಸೇರಿದಂತೆ ದಂಟರಮಕ್ಕಿ ಗ್ರಾಮಸ್ಥರು ಹಾಜರಿದ್ದರು.