ಕುಂದಾಪುರ: ರಘುಪತಿ ಭಟ್ಟರು ಇಲ್ಲಿಯವರೆಗೆ ಶೋಭಾ ಕರಂದ್ಲಾಜೆಯವರ ಒಂದೇ ಒಂದು ಫೋಟೋವನ್ನು ಫ್ಲೆಕ್ಸ್‌ಗೆ ಹಾಕಿಲ್ಲ. ಅವರ ಬಳಿ ಮಾತನಾಡುತ್ತಿರಲಿಲ್ಲ. ಶೋಭಾ ಮುಖವನ್ನು ನೋಡುತ್ತಿರಲಿಲ್ಲ. ಶೋಭಾ ಕರಂದ್ಲಾಜೆ ಇದ್ದ ಸಭೆಗೆ ಹೋಗುತ್ತಿರಲಿಲ್ಲ. ಇದೀಗ ಶೋಭಾ ಬಗ್ಗೆ ರಘುಪತಿ ಭಟ್ಟರಿಗೆ ಒಮ್ಮೇಲೆ ವ್ಯಾಮೋಹ ಹೇಗೆ ಹುಟ್ಟಿತು ಎಂದು ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಪ್ರಶ್ನಿಸಿದ್ದಾರೆ.
ಅವರು ಮಂಗಳವಾರ ಕುಂದಾಪುರದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದ ಬಳಿಕ ತಮ್ಮ ವಿರುದ್ದ ರಘುಪತಿ ಭಟ್ ಅವರ ಸರಣಿ ಟೀಕೆಗಳಿಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಮಾತನಾಡುತ್ತಾ, ರಘುಪತಿ ಭಟ್ ಅವರಿಗೆ ನನ್ನ ಬಗ್ಗೆ ತಲೆಬಿಸಿ ಬೇಡ ಎಂದರು.
ಕಾರ್ಯಕರ್ತರು ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯನ್ನು ಒಪ್ಪಿದ್ದು ಅವರೇ ಜನರ ಬಳಿ ತೆರಳುತ್ತಾರೆ. ಗೋ ಬ್ಯಾಕ್ ಶೋಭಾ ಚಳವಳಿ ಬಿಜೆಪಿಗರೇ ಪ್ರಾರಂಭಿಸಿದ್ದು ಅದನ್ನು ಯಶಸ್ವಿಯಾಗಿ ಪೂರೈಸುವುದು ಮಾತ್ರ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು. ಗೋ ಬ್ಯಾಕ್ ಶೋಭಾ ಅಭಿಯಾನ ಆರಂಭಿದವರು ಶೋಭಾ ಕರಂದ್ಲಾಜೆಯನ್ನು ಮನೆಗೆ ಕಳುಹಿಸುತ್ತಾರೆ ಎಂದರು.
ಕಾಂಗ್ರೆಸ್‌ನಲ್ಲಿ ಯಾವುದೇ ಬಂಡಾಯವಿಲ್ಲ. ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದು ಚಿಹ್ನೆಯಿಂದ ಯಾವುದೇ ಸಮಸ್ಯೆಯೂ ಇಲ್ಲ. ಕೆಲಸ ಮಾಡುವ ಕ್ಷೇತ್ರದೊಳಗಿನ ಅಭ್ಯರ್ಥಿಯನ್ನು ಗೆಲ್ಲಿಸುವ ವಿಶ್ವಾಸವಿದೆ ಎಂದರು.