ಉಡುಪಿ: ಈ ರಾಜ್ಯದಲ್ಲಿ ಯಾರಾದರೂ ಹೆಚ್ಚು ಪಕ್ಷಾಂತರ ಮಾಡಿದ್ದರೆ ಅದು ಸಿದ್ದರಾಮಯ್ಯ. ಅವರು ತಮ್ಮ ರಾಜಕೀಯ ಜೀವನದಲ್ಲಿ ಒಟ್ಟು 7 ಬಾರಿ ಪಕ್ಷಗಳನ್ನು ಬದಲಾಯಿಸಿದ್ದು ನಾನು ಹುಟ್ಟಿನಿಂದ ಕಾಂಗ್ರೆಸ್ ಪಕ್ಷದಲ್ಲಿದ್ದು ಈಗ ಸನ್ನಿವೇಶಕ್ಕೆ ಅನುಗುಣವಾಗಿ ಬಿಜೆಪಿ ಸೇರಿದ್ದೇನೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಅವರು ಶುಕ್ರವಾರ ತಮ್ಮ ನಿವಾಸದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉಡುಪಿಯಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನನ್ನನ್ನು ಪಕ್ಷಾಂತರಿ ಎಂದು ಕರೆದಿದ್ದಾರೆ. ಸಿದ್ದರಾಮಯ್ಯ ಅವರು 1978 ರಲ್ಲಿ ರೈತಸಂಘದಲ್ಲಿದ್ದರು, 1983 ರಲ್ಲಿ ಭಾರತೀಯ ಲೋಕದಳ, ಸಮಾಜಪಕ್ಷ ಜನತಾದಳ, ಜಾತ್ಯಾತೀತ ಜನತಾದಳ, ಅಹಿಂದ ಸೇರಿಕೊಂಡರು ಬಳಿಕ ಕಾಂಗ್ರೆಸ್ ಸೇರಿದ್ದರು ಎನ್ನುವುದು ಅವರಿಗೆ ನೆನಪಿರಲಿ ಎಂದ ಅವರು ಹಾಗಿದ್ದರೆ ಬೇರೆ ಪಕ್ಷದಿಂದ ಕಾಂಗ್ರೆಸ್ ಗೆ ಬರಬೇಡಿ ಎಂದು ಘೋಷಿಸಿ ಎಂದು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರಿಗೆ ಸವಾಲು ಹಾಕಿದರು.
ಸಮಾವೇಶದಲ್ಲಿ ಸಿದ್ದರಾಮಯ್ಯನವರು ನನ್ನನ್ನು ಏಕವಚನದಲ್ಲಿ ಕರೆದು, ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ. ಸಿದ್ದರಾಮಯ್ಯನವರ ಕ್ಯಾಬಿನೆಟ್ ನಲ್ಲಿ ನಾನೂ ಕೂಡಾ ಮಂತ್ರಿಯಾಗಿದ್ದೆ. ಹಾಗಿರುವಾಗ ಅವರು ಭಾಷೆಯನ್ನು ಬಳಸುವಾಗ ಯೋಚಿಸಬೇಕು. ನನ್ನ ಬಗ್ಗೆ ಹೀಗೆ ಮಾತನಾಡಿದವರು ಜನಸಾಮಾನ್ಯರ ಬಗ್ಗೆ ಹೇಗೆ ಮಾತನಾಡಬಹುದು? ಸಿದ್ದರಾಮಯ್ಯ ವಿರುದ್ಧ ಕೆಟ್ಟ ಮಾತನಾಡಲು ಎಲ್ಲರಿಗೂ ಬರುತ್ತದೆ ಆದರೆ ತಂದೆ ತಾಯಿ ನನಗೆ ಸಂಸ್ಕಾರ ಸೌಜನ್ಯತೆ ಕಲಿಸಿದ್ದಾರೆ ಹಾಗಾಗಿ ನಾನು ಅವರ ರೀತಿಯಲ್ಲಿ ಮಾತನಾಡುವುದಿಲ್ಲ ಎಂದರು.
ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಡಲಾಗಿತ್ತು. ಆ ವೇಳೆ ನಾನೇ ಸಿದ್ದರಾಮಯ್ಯ ಅವರಿಗೆ ಕರೆ ಮಾಡಿ ಉಡುಪಿ-ಚಿಕ್ಕಮಗಳೂರನ್ನು ಜೆಡಿಎಸ್ ಗೆ ಬಿಟ್ಟುಕೊಡದಂತೆ ಮನವಿ ಮಾಡಿದ್ದೆ. ಆದರೆ ಮೈಸೂರು ಕ್ಷೇತ್ರವನ್ನು ಕಾಂಗ್ರೆಸ್ ಗೆ ಉಳಿಸಿಕೊಳ್ಳಲು ನಮ್ಮ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟು ಕೊಟ್ಟು ಸ್ವಾರ್ಥ ಸಾಧನೆ ಮಾಡಿದರು. ಜೆಡಿಎಸ್ ನಲ್ಲಿ ಟಿಕೆಟ್ ಪಡೆಯೋ ಮೊದಲು ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಅವರ ಪರವಾನಿಗೆ ಪಡೆದಿದ್ದೇನೆ. ಸಿದ್ದರಾಮಯ್ಯನವರ ಸುಳ್ಳನ್ನು ಖಂಡಿಸುತ್ತೇನೆ ಎಂದರು.
ಜೆಡಿಎಸ್ ನಿಂದ ಹಣ ಪಡೆದಿರುವುದಾಗಿ ಸಿದ್ದರಾಮಯ್ಯ ಆರೋಪಿಸಿದ್ದು, ಜೆಡಿಎಸ್ ನಿಂದ ಬಂದಿರುವ ಹಣವನ್ನು ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ಸಮಾನವಾಗಿ ಹಂಚಿಕೆ ಮಾಡಿದ್ದು ನಾನು ಒಂದು ನಯಾಪೈಸೆ ಮುಟ್ಟಿಲ್ಲ.ಕಾಂಗ್ರೆಸ್ ಪಕ್ಷ ನನ್ನ ಕುಟುಂಬಕ್ಕೆ ಎಲ್ಲಾ ರೀತಿಯ ಅಧಿಕಾರ ನೀಡಿರುವುದಾಗಿ ಡಿ.ಕೆ ಶಿವಕುಮಾರ್ ಹೇಳಿದ್ದು, ನನ್ನ ತಂದೆ ಸ್ವಂತ ಹಣದಿಂದ ಕಾಂಗ್ರೆಸ್ ಪಕ್ಷವನ್ನು ಕಟ್ಟಿದ್ದಾರೆ. ನನ್ನ ತಾಯಿ ಕೂಡ ಪಕ್ಷಕ್ಕೆ ಪ್ರಾಮಾಣಿಕ ಸೇವೆ ನೀಡಿದ್ದಾರೆ. ನಾನು ಉಡುಪಿಯಲ್ಲಿ ಸಂಪೂರ್ಣ ನೆಲಕ್ಕಚ್ಚಿದ ಕಾಂಗ್ರೆಸ್ ಅನ್ನು ಪುನರುಜ್ಜೀವನ ಮಾಡಿದ್ದೆ. ಲಂಚದ ಹಣದಿಂದ ಇನ್ನೊಬ್ಬರ ಕಿಸೆಯಿಂದ ಕಿತ್ಕೊಂಡು ಪಕ್ಷ ಕಟ್ಟಿಲ್ಲ ಸ್ವಜನ ಪಕ್ಷಪಾತ, ಲಂಚ ಪಡೆಯಲು ಪಕ್ಷವನ್ನು ಉಪಯೋಗಿಸಿಲ್ಲ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಎಲ್ಲಾ ರೀತಿಯ ಅಧಿಕಾರ ಅನುಭವಿಸಿ ಬಿಜೆಪಿ ಸೇರಿದ ಎಸ್ ಎಂ ಕೃಷ್ಣ ಅವರ ಬಗ್ಗೆ ಯಾಕೆ ಡಿ.ಕೆ ಶಿವಕುಮಾರ್ ಮೌನವಾಗಿದ್ದಾರೆ? ಕೃಷ್ಣ ಅವರ ಮೊಮ್ಮಗನಿಗೆ ಮಗಳನ್ನು ಕೊಟ್ಟಾಗ ಪಕ್ಷಾಂತರ ನೆನಪಾಗಿಲ್ವಾ? ಎಂದು ಪ್ರಶ್ನಿಸಿದರು.
2023 ರ ಚುನಾವಣೆಯಲ್ಲಿ ಬಿಜೆಪಿ ಐದಕ್ಕೆ ಐದು ಸ್ಥಾನ ಗೆಲ್ಲಲಿದ್ದು, ಬಿಜೆಪಿ ಸೋಲಿಸುವ ಶಕ್ತಿ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಅವಕಾಶ ಕೊಟ್ಟರೆ ಜನರ ಸೇವೆ ಮಾಡುತ್ತೇನೆ ಅವಕಾಶ ಸಿಗದಿದ್ದರೆ ಪಕ್ಷದ ಸೇವೆ ಮಾಡುತ್ತೇನೆ. ನಾನು ಯಾವುದೇ ಷರತ್ತು ಹಾಕಿ ಬಿಜೆಪಿಗೆ ಬಂದಿಲ್ಲ.ಇಡೀ ದೇಶವೇ ಮೋದಿಯನ್ನು ಹೊಗಳುತ್ತಿರುವಾಗ ನಾನು ಹೊಗಳದೆ ಇರುವುದು ಮೂರ್ಖತನವಾಗುತ್ತದೆ ಎಂದು ಅವರು ಹೇಳಿದರು.