udupixpress
Home Trending ಪರ್ಕಳದಲ್ಲಿ ಚಲಿಸುತ್ತಿದ್ದ ಬೈಕ್ ಮೇಲೆ ಉರುಳಿ ಬಿದ್ದ ವಿದ್ಯುತ್ ಕಂಬ: ಸಹಸವಾರ ಗಂಭೀರ

ಪರ್ಕಳದಲ್ಲಿ ಚಲಿಸುತ್ತಿದ್ದ ಬೈಕ್ ಮೇಲೆ ಉರುಳಿ ಬಿದ್ದ ವಿದ್ಯುತ್ ಕಂಬ: ಸಹಸವಾರ ಗಂಭೀರ

ಮಣಿಪಾಲ: ಪರ್ಕಳ ಶ್ರೀಕೃಷ್ಣ ಕಲ್ಯಾಣ ಮಂಟಪದ ಎದುರು ರಾಷ್ಟ್ರೀಯ ಹೆದ್ದಾರಿ (169ಎ) ಯಲ್ಲಿ ಚಲಿಸುತ್ತಿದ್ದ ಬೈಕ್ ಮೇಲೆ ರಸ್ತೆಯ ಬದಿಯ ವಿದ್ಯುತ್ ಕಂಬವೊಂದು ಉರುಳಿ ಬಿದ್ದ ಪರಿಣಾಮ ಸಹಸವಾರ ತೀವ್ರ ಗಾಯಗೊಂಡಿದ್ದಾನೆ.

ಗಾಯಗೊಂಡವರನ್ನು ಹಿರಿಯಡ್ಕ ಅಂಜಾರಿನ ಸದಾಶಿವ ಶೇರಿಗಾರ್(58) ಎಂದು ಗುರುತಿಸಲಾಗಿದೆ. ಇವರು ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೈಕ್ ಸವಾರ ಹರೀಶ್ ಯಾವುದೇ ಗಾಯಗಳಾಗದೆ ಪರಾಗಿದ್ದಾರೆ.

ಏಕಾಏಕಿಯಾಗಿ ಬೀಸಿದ ಗಾಳಿಗೆ ಮನೆಯ ಕಂಪೌಂಡ್ ಒಳಗಿದ್ದ ತಂಗಿನ ಮರವೊಂದು ವಿದ್ಯುತ್ ತಂತಿಯ ಮೇಲೆ ಬಿದ್ದಿದ್ದು, ಇದರ ಜೊತೆಗೆ ರಸ್ತೆ ಬದಿಯ ವಿದ್ಯುತ್ ಕಂಬಗಳು ರಸ್ತೆಗೆ ಉರುಳಿದ್ದವು ಎನ್ನಲಾಗಿದೆ.

ಇದೇ ವೇಳೆ ರಸ್ತೆಯಲ್ಲಿ ಹೋಗುತ್ತಿದ್ದ ಬೈಕ್ ಮೇಲೆ ವಿದ್ಯುತ್ ಕಂಬ ಬಿದ್ದ ಪರಿಣಾಮ ಹಿಂಬದಿ ಸವಾರ ಸದಾಶಿವ ಶೇರಿಗಾರ್ ತೀವ್ರ ಗಾಯಗೊಂಡಿದ್ದಾರೆ ಎಂದು ಮಣಿಪಾಲ ಪೊಲೀಸರು ತಿಳಿಸಿದ್ದಾರೆ.