ಬೈಂದೂರು: ಗ್ರಾಮೀಣ ಪ್ರದೇಶದಲ್ಲಿ ಮನೆಗಳಿಗೆ ವಿದ್ಯುತ್ ಪಡೆಯಲು ಸ್ಥಳೀಯಡಳಿತದಿಂದ ಎನ್‌ಓಸಿ ಪಡೆಯುವ ಕ್ರಮವನ್ನು ಒಂದು ವಾರದೊಳಗೆ ತಿದ್ದುಪಡಿ ಮಾಡುತ್ತೇವೆ ಎಂದು ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಹೇಳಿದರು.
ಸೋಮವಾರ ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಬೈಂದೂರು ಬಿಜೆಪಿ ಕಚೇರಿಗೆ ಭೇಟಿ ನೀಡಿ ಅಭಿನಂದನಾ ಸಭೆಯಲ್ಲಿ ಮಾತನಾಡಿದ ಅವರು, ಈ ನೂತನ ಕ್ರಮವನ್ನು ಮುಂದಿನ ವಾರದೊಳಗೆ ಅಧಿಕೃವಾಗಿ ಜಾರಿಗೊಳಿಸುತ್ತೇನೆ. ಇದರಿಂದ ಸುಮಾರು 2.50 ಲಕ್ಷ ಜನರ ಮನೆಗಳಿಗೆ ವಿದ್ಯುತ್ ಸಂಪರ್ಕ ದೊರೆಯುತ್ತದೆ ಎಂದರು.
ಉಡುಪಿ, ದಕ್ಷಿಣ ಕನ್ನಡದಲ್ಲಿ ಥ್ರೀ ಪೇಸ್ ಸಮಸ್ಯೆ ಇದೆ. ಈ ಸಮಸ್ಯೆ ಮುಕ್ತಿಗೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಮೆಸ್ಕಾಂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕ್ರಮ ಕೈಗೊಳ್ಳುತ್ತೇನೆ. ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಎರಡು ಬಹುದೊಡ್ಡ ಖಾತೆಗಳು. ಈ ಖಾತೆಯ ಮೂಲಕ ರಾಜ್ಯದ ಜನರಿಗೆ ಹಾಗೂ ವಿಶೇಷವಾಗಿ ಉಡುಪಿ ಜಿಲ್ಲೆಗೆ ಏನು ಮಾಡಲು ಸಾಧ್ಯ ಎಂಬುದನ್ನು ಅರಿತು ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಜಿಲ್ಲೆಯ ಶಾಸಕರು, ಸಂಸದರು ಹಾಗೂ ಮಂತ್ರಿಗಳ ಜೊತೆ ಸೇರಿಕೊಂಡು ಸಭೆ ನಡೆಸಿ ಉಡುಪಿ ಜಿಲ್ಲೆಗೆ ಶಾಶ್ವತ ಅಭಿವೃದ್ಧಿ ಯೋಜನೆಗಳನ್ನು ತರಲು ಪ್ರಯತ್ನಿಸುತ್ತಿದ್ದೇವೆ. ಕಾಲಮಿತಿಯೊಂದಿಗೆ ಹೊಸ ಹೊಸ ಯೋಜನೆಗಳನ್ನು ಪರಿಚಯಿಸುತ್ತೇನೆ.
ವಿರೋಧ ಪಕ್ಷದ ಶಾಸಕನಾಗಿದ್ದಾಗ ಬೇರೆ ಬೇರೆ ಇಲಾಖೆಯ ಅನುದಾನಗಳನ್ನು ತಂದು ಕಾರ್ಕಳವನ್ನು ಅಭಿವೃದ್ದಿ ಪಡಿಸಿದ್ದೇನೆ. ಈಗ ಮಂತ್ರಿಯಾಗಿದ್ದ ಎಲ್ಲಾ ಅನುದಾನಗಳನ್ನು ಸದುಪಯೋಗ ಪಡಿಸುತ್ತೇನೆ. ಜನರಿಗೆ ಒಳಿತಾಗುವಂತಹ ಯೋಜನೆಗಳಿಗೆ ಒತ್ತು ನೀಡುತ್ತೇನೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಕೂತುಕೊಂಡು ಸಾವಿರಾರು ಸರ್ವೇ ನಂಬರ್ ಗಳನ್ನು ಸೇರಿಸಿ ಡೀಮ್ಡ್ ಫಾರೆಸ್ಟ್ ಅಂತ ಘೋಷಣೆ ಮಾಡಿದರು. ಅದರ ಪರಿಣಾಮ ಅನೇಕ ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಯಡಿಯೂರಪ್ಪನವರ ಸರಕಾರ ಈ ಸಮಸ್ಯೆಗೆ ಮುಕ್ತಿ ನೀಡಲು ಚಾಲನೆಯನ್ನು ನೀಡಿತ್ತು, ಈಗ ಬಸವರಾಜ್ ಬೊಮ್ಮಾಯಿ ಅವರ ಸರಕಾರ ವೇಗವನ್ನು ನೀಡಿದೆ. ವಾರದೊಳಗೆ ರಾಜ್ಯದಾದ್ಯಂತ ಡೀಮ್ಡ್ ಫಾರೆಸ್ಟ್ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುತ್ತೇವೆ.
ಬೈಂದೂರಿನ ಶಾಸಕರಾದ ಸುಕುಮಾರ್ ಶೆಟ್ಟಿಯವರು ಅಭಿವೃದ್ಧಿ ಯೋಜನೆಗಳ ಬೇಡಿಕೆಯ ಪಟ್ಟಿಯನ್ನು ಸಿದ್ದ ಪಡಿಸಿನೀಡಿದ್ದಾರೆ. ಮೂರು ಬಾರಿ ಶಾಸಕನಾಗಿ ಕಾರ್ಕಳದಲ್ಲಿ ನಾನು ಮಾಡಿದ ಅಭಿವೃದ್ಧಿಗಳನ್ನು ಮೊದಲ ಅವಧಿಯಲ್ಲೇ ಅವರು ಮಾಡಿದ್ದಾರೆ. ಕೊಲ್ಲೂರಿನಲ್ಲಿ ಸಬ್ ಸ್ಟೇಷನ್ ಬೇಡಿಕೆಯೂ ಅದರಲ್ಲಿ ಒಂದಾಗಿದ್ದು, ಡೀಮ್ಡ್ ಫಾರೆಸ್ಟ್ ಸಮಸ್ಯೆಯಿಂದಾಗಿ ಅದು ವಿಳಂಬವಾಗಿದೆ. ಬೆಂಗಳೂರಿನಲ್ಲಿ ಸಭೆ ನಡೆಸಿ ಅರಣ್ಯ ಇಲಾಖೆಯೊಂದಿಗೆ ಚರ್ಚಿಸಿ ಈ ಸಮಸ್ಯೆಗೆ ಪರಿಹಾರ ಕಂಡುಕೊಂಡು, ಕೊಲ್ಲೂರಿನಲ್ಲಿ ಸಬ್ ಸ್ಟೇಷನ್ ಗೆ ಅನುದಾನ ನೀಡುತ್ತೇವೆ ಎಂದರು.
ಕೆಲವೇ ತಿಂಗಳುಗಳಲ್ಲಿ ಜಿ.ಪಂ ಹಾಗೂ ತಾ.ಪಂ ಚುನಾವಣೆ ಬರಲಿದ್ದು, ಗ್ರಾಮ ಮಟ್ಟದಿಂದ ಕೇಂದ್ರದವರೆಗೆ ಉತ್ತಮ ಆಡಳಿತ ನೀಡಲು ಎಲ್ಲರ ಸಹಕಾರ ಅಗತ್ಯ ಎಂದು ನುಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಬೈಂದೂರು ಶಾಸಕ ಬಿ.ಎಮ್.ಸುಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.