ಪಟ್ನಾ: ಬಿಹಾರ ವಿಧಾನಸಭೆಗೆ ಇದೇ ಅಕ್ಟೋಬರ್ 28ರಿಂದ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್ 10ರಂದು ಫಲಿತಾಂಶ ಪ್ರಕಟವಾಗಲಿದೆ. ಅದಕ್ಕೂ ಮುನ್ನ ಕೆಲ ಟಿವಿ ಮಾಧ್ಯಮಗಳ ಚುನಾವಣಾಪೂರ್ವ ಸಮೀಕ್ಷೆಗಳು ರಾಜಕೀಯ ಪಕ್ಷಗಳ ಭವಿಷ್ಯವನ್ನು ನಿರ್ಧರಿಸುವ ಪ್ರಯತ್ನ ನಡೆಸುತ್ತಿವೆ.
ಆಡಳಿತಾರೂಢ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಎನ್ಡಿಎ ಮೈತ್ರಿಕೂಟವು 160 ಸೀಟುಗಳೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಟೈಮ್ಸ್ ನೌ-ಸಿ ವೋಟರ್ ಸಮೀಕ್ಷೆ ಹೇಳಿದೆ.
243 ಸೀಟುಗಳ ವಿಧಾನಸಭೆಯಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು 122 ಮ್ಯಾಜಿಕ್ ಸಂಖ್ಯೆ ತಲುಪಬೇಕಿದೆ.
ಯಾರಿಗೆ ಪಕ್ಷಕ್ಕೆ ಎಷ್ಟು ಸೀಟು:
ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 84 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಅದರ ಮಿತ್ರ ಪಕ್ಷ ಜೆಡಿಯು 70 ಸೀಟುಗಳಲ್ಲಿ ಜಯಗಳಿಸಲಿದೆ ಎಂದು ಸಮೀಕ್ಷೆ ತಿಳಿಸಿದೆ. ಇನ್ನುಳಿದಂತೆ ಮಹಾ ಘಟಬಂಧನದಲ್ಲಿ ಆರ್ಜೆಡಿ 56 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದು, ಕಾಂಗ್ರೆಸ್ 15 ಸೀಟುಗಳಿಗೆ ತೃಪ್ತಿ ಪಟ್ಟುಕೊಳ್ಳಲಿದೆ. ಎಲ್ಜೆಪಿ 5 ಸೀಟುಗಳಲ್ಲಿ ಜಯಗಳಿಸಲಿದೆ. ಎನ್ಡಿಎ ಮಿತ್ರಪಕ್ಷಗಳು 5, ಎಡಪಕ್ಷಗಳು 5 ಹಾಗೂ ಇನ್ನುಳಿದ ಎರಡು ಸೀಟುಗಳು ಬೇರೆ ಪಕ್ಷಗಳ ಪಾಲಾಗಲಿವೆ ಎಂದು ಸಮೀಕ್ಷೆ ಹೇಳಿದೆ.