ಬದುಕಿನಲ್ಲಿ ಅನೇಕ ಸವಾಲುಗಳನ್ನು ಎದುರಿಸಿದ ಅಲೆಕ್ಸ್ ಉತ್ತಮ ಕರಾಟೆಪಟು. ಇವರ ೪೦ ನೇ ವಯಸ್ಸಿನಲ್ಲಿ ಮತಿಭ್ರಮಣೆ ಪ್ರಾರಂಭವಾಯಿತು. ಕುಟುಂಬದವರು ಕೋಣೆಯೊಳಗೆ ಕೂಡಿ ಹಾಕಿದರು. ಒಬ್ಬ ಸಾಮಾಜಿಕ ಕಾರ್ಯಕರ್ತರು ಇವರನ್ನು ಗುರುತಿಸಿ ಪಶ್ಚಿಮಕ್ಕೆ ಕರೆ ತಂದರು. ಇವರು ಸ್ಕಿಜ಼ೋಫ್ರೀನಿಯಾ ಎಂಬ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದರು. ಸೂಕ್ತ ಚಿಕಿತ್ಸೆ ಹಾಗೂ ಆಪ್ತಸಮಾಲೋಚನೆಗಳೊಂದಿಗೆ ವಿಶೇಷ ಕಾಳಜಿ ವಹಿಸಲಾಯಿತು. ಈಗ ಸಂಸ್ಥೆಯ ದ್ವಾರಪಾಲಕರಾಗಿದ್ದು, ಹಾಲು, ದಿನಪತ್ರಿಕೆಗಳನ್ನು ಸಮೀಪದ ಅಂಗಡಿಯಿಂದ ತರುವ ಜವಾಬ್ದಾರಿ ಇವರದ್ದು. ಇಂತಹ ಅನೇಕ ನಿರಾಶ್ರಿತರು, ಕುಟುಂಬ ಇದ್ದೂ ಇಲ್ಲದಂತಾದವರು, ದಿವ್ಯಾಂಗರು, ವೃದ್ಧರು, ಮದ್ಯ ಹಾಗೂ ಮಾದಕದ್ರವ್ಯ ವ್ಯಸನಿಗಳಿಗೆ ಒಂದು ಆಶ್ರಯತಾಣ, ಮಂಗಳೂರು ಉಳ್ಳಾಲ ಸಮೀಪದ ಸೋಮೇಶ್ವರದಲ್ಲಿರುವ ‘ಪಶ್ಚಿಮ ಪುನರ್ವಸತಿ ಕೇಂದ್ರ’.
ಜೀವನದಲ್ಲಿ ನೊಂದು, ಬೆಂದವರಿಗೆ, ತಮ್ಮ ಸಂಧ್ಯಾಕಾಲದಲ್ಲಿರುವವರಿಗೊಂದು ನೆಮ್ಮದಿಯ ಬದುಕನ್ನು ಕಲ್ಪಿಸಿಕೊಡುವುದೇ ಇದರ ಉದ್ದೇಶ. ರೋಹಿತ್ ಸ್ಯಾಂಕ್ಟಸ್ ಹಾಗೂ ಸುನೀತಾ ಮಾಂತೇರೋ ದಂಪತಿಗಳ ಕನಸಿನ ಕೂಸು ಈ ಪಶ್ಚಿಮ.
ಕನಸನ್ನು ಬೆಂಬತ್ತಿದ ನಡಿಗೆ:
ರೋಹಿತ್ ಸ್ಯಾಂಕ್ಟಸ್ ಹಾಗೂ ಸುನೀತಾ ಮಾಂತೇರೋ ದಂಪತಿಯ ಈ ಕನಸು ನನಸಾಗಲಿಕ್ಕೆ ಆರಂಭದಲ್ಲಿ ಜಾಗದ ಹಾಗೂ ಹಣದ ಕೊರತೆ ಕಾಡಿತ್ತು.ಆದರೆ ಮನೆಯನ್ನೇ ಆಶ್ರಯತಾಣವನ್ನಾಗಿ ಪರಿವರ್ತಿಸಿ, ದಾನಿಗಳ ನೆರವಿನಿಂದ ಸಂಸ್ಥೆ ಮುನ್ನಡೆಯುತ್ತಿದೆ. ವೈದ್ಯಕೀಯ ಚಿಕಿತ್ಸೆ, ಆಪ್ತಸಮಾಲೋಚನೆ, ಮನೋರಂಜನಾ ಚಟುವಟಿಕೆಗಳು, ಮಧ್ಯ ಹಾಗೂ ಮಾದಕ ವ್ಯಸನಗಳ ಬಗ್ಗೆ ಜಾಗೃತಿ ಕಾರ್ಯಕ್ರಮ, ಮಧ್ಯವರ್ಜನಾ ಶಿಬಿರಗಳು ಇಲ್ಲಿನ ಕೇಂದ್ರಬಿಂದು.
ಭರವಸೆಯ ಕಿರಣ:
ಅನೇಕ ಯುವಕ, ಯುವತಿಯರ ಬಾಳಿಗೂ ಈ ಸಂಸ್ಥೆ ದಾರಿದೀಪವಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿ ಇಲ್ಲಿಗೆ ಬಂದು, ಚಿಕಿತ್ಸೆ ಪಡೆದು, ಗುಣಮುಖರಾಗಿ ಇಂದು ಅಲ್ಲಿಯೇ ಕಾರ್ಯನಿರ್ವಹಿಸುತ್ತಿರುವ ಹಲವರನ್ನು ನೋಡಬಹುದಾಗಿದೆ. ಖುಷಿ, ಕಾಳಜಿಯಿಂದ ಎಲ್ಲರ ಸೇವೆ ಮಾಡುತ್ತಾ, ತಮ್ಮ ಬದುಕಿಗೂ ಉಳಿತಾಯ ಮಾಡಿ ದಾರಿ ಕಂಡುಕೊಂಡವರಿದ್ದಾರೆ.
ದಂಪತಿಗಳ ಕನಸಿಗೆ ನಿಮ್ಮ ನೆರವು ಇರಲಿ:
ಸಾಮಾಜಿಕ ಕಾರ್ಯಕರ್ತರು, ಸಂಘ ಸಂಸ್ಥೆಗಳು ನೆರವಿನ ಅವಶ್ಯಕತೆಯಿರುವ ಅನೇಕರನ್ನು ಈ ಸಂಸ್ಥೆಗೆ ಕಳುಹಿಸುತ್ತಿದ್ದಾರೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಸ್ಥಳಾವಕಾಶದ ಕೊರತೆ ಇದ್ದು, ಸಕಲ ಸವಲತ್ತುಗಳನ್ನು ಹೊಂದಿದ ೩೦೦ ಮಂದಿಗೆ ಆಶ್ರಯ ನೀಡುವ ಸುಸಜ್ಜಿತ ಕಟ್ಟಡ ನಿರ್ಮಿಸುವ ಬಯಕೆ ಸಂಸ್ಥಾಪಕರದ್ದು.
ಮಾನವೀಯತೆ, ಮನುಷ್ಯತ್ವಗಳಿಗೆ ಬೆಲೆ ಕಡಿಮೆಯಾಗುತ್ತಿರುವ ಇಂದಿನ ಸಮಾಜದಲ್ಲಿ, ಎಲ್ಲಾ ಚೌಕಟ್ಟುಗಳನ್ನು ಮೀರಿ ಸೇವಾ ಮನೋಭಾವದಿಂದ, ಮನುಷ್ಯರ ಭಾವನೆಗಳಿಗೆ ಬೆಲೆಕೊಟ್ಟು ಇಂತಹಾ ಒಂದು ಅದ್ಭುತ ಸಮಾಜಕಾರ್ಯ ಮಾಡುತ್ತಿರುವವರಿಗೆ ಬೆನ್ನುತಟ್ಟಿ ಪ್ರೋತ್ಸಾಹಿಸಬೇಕಿದೆ. ಅನೇಕರ ಖುಷಿಗೆ ಕಾರಣರಾಗಿರುವ ಈ ದಂಪತಿಗಳ ಕನಸುಗಳಿಗೆ ನೀವು ನೆರವಾದರೆ ಮರುಗುವ ಅನಾಥ ಜೀವಗಳಿಗೆ ಬೆಳಕು ನೀಡಬಹುದು. ಅವರ ಬಾಳಲ್ಲಿ ಹೊಸ ಭರವಸೆ ಸೃಷ್ಠಿಸುವ ಸಾರ್ಥಕ ಗಳಿಗೆಯಲ್ಲಿ ನೀವೂ ಪಾಲುದಾರರಾಗಬಹುದು. ಸಹಾಯಹಸ್ತ ಚಾಚುವ ದಾನಿಗಳು, ಆಸಕ್ತರು ಸಂಸ್ಥೆಯನ್ನು ಸಂಪರ್ಕಿಸಬಹುದು :9945990755,8494950755
ಕನಸು ಇನ್ನಷ್ಟಿದೆ: ದಿನನಿತ್ಯ ಓಡಾಡುವಾಗ ಬೀದಿಬದಿಯಲ್ಲಿ ಕಾಣುವ ನಿರಾಶ್ರಿತರನ್ನು ನೋಡಿದಾಗ ಅವರಿಗೊಂದು ನೆಲೆ ಕಲ್ಪಿಸಿ, ನೆಮ್ಮದಿಯ ಜೀವನ ನೀಡುವ ಬಯಕೆ. ಮನೆಯವರು, ಸಂಬಂಧಿಕರು ಇಲ್ಲಿಗೆ ನಿವಾಸಿಗಳನ್ನು ಬಿಟ್ಟು ಹೋದ ಮೇಲೆ ಸಂಬಂಧವೇ ಕಳಚಿಕೊಳ್ಳುತ್ತಾರೆ. ಕೆಲವರಂತೂ ಗೇಟಿನ ಹೊರಗೇ ಬಿಟ್ಟು ಹೋಗುತ್ತಾರೆ. ಸ್ವಚ್ಛತೆ ಹಾಗೂ ಆರೋಗ್ಯ ಕಾಪಾಡುವುದೂ ನಮ್ಮ ಕರ್ತವ್ಯ. ಸುಸಜ್ಜಿತ ಸ್ಥಳ, ಹಾಗೂ ವ್ಯವಸ್ಥೆಗಳ ಕೊರತೆ ಸದ್ಯಕ್ಕೆ ಇದೆ. ಕೆಲಸದ ಬಗ್ಗೆ ನನಗೆ ತೃಪ್ತಿಯಂತೂ ಖಂಡಿತಾ ಇದೆ ಎನ್ನುತ್ತಾರೆ ಪಶ್ಚಿಮ್ ಟ್ರಸ್ಟ್ ನಿರ್ದೇಶಕ, ರೋಹಿತ್ ಸ್ಯಾಂಕ್ಟಸ್
ಬರಹ: ಸುವರ್ಚಲಾ ಅಂಬೇಕರ್
ವಿಡಿಯೋ ಕೃಪೆ:ಸಂದೀಪ್