ಬೆಂಗಳೂರು: ವಿಧಾನಸೌಧದಲ್ಲಿ ಮಂಗಳವಾರ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಯ್ಯದ್ ನಾಸೀರ್ ಹುಸೇನ್ ಗೆಲುವು ಸಾಧಿಸಿದ ವೇಳೆ ಅವರ ಬೆಂಬಲಿಗರು ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದಾರೆನ್ನುವ ಆರೋಪಕ್ಕೆ ಸಂಬಂಧಿಸಿ ಬಿಜೆಪಿ ಮುಖಂಡರು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮವಾರ ವಿಪಕ್ಷ ನಾಯಕ ಆರ್ ಅಶೋಕ್ ನೇತೃತ್ವದಲ್ಲಿ ವಿಧಾನಸೌಧ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ ಬಿಜೆಪಿಗರು ಈ ವಿಚಾರವಾಗಿ ದೇಶದ್ರೋಹ ಬಗೆದ ಪುಂಡರನ್ನು ಬಂಧಿಸಿ, ಅವರ ಮೇಲೆ ಕ್ರಿಮಿನಲ್ ಕೇಸು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ದೂರು ಸಲ್ಲಿಸಿದರು. ಇಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲೂ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
ಈ ವಿಚಾರವಾಗಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ವಿಪಕ್ಷ ನಾಯಕ ಆರ್ ಅಶೋಕ, “ಪ್ರಜಾಪ್ರಭುತ್ವದ ದೇಗುಲವಾದ ವಿಧಾನಸೌಧದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೂಗಿರುವ ಘಟನೆ ಅತ್ಯಂತ ಖಂಡನೀಯವಾಗಿದ್ದು ಈ ಘಟನೆ ಕಾಂಗ್ರೆಸ್ ಪಕ್ಷದ ವಿಕೃತ, ದೇಶದ್ರೋಹಿ ಮನಸ್ಥಿತಿಯನ್ನು ಪ್ರದರ್ಶನ ಮಾಡಿದೆ” ಎಂದು ಆರೋಪಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪ್ರತಿಕ್ರಿಯಿಸಿ “ಚುನಾವಣೆಯಲ್ಲಿ ಗೆದ್ದಿದ್ದರೆ ನಿಮ್ಮ ಅಭ್ಯರ್ಥಿಗಳಿಗೆ ಜೈಕಾರ ಹಾಕಿ, ನಿಮ್ಮ ಪಕ್ಷಕ್ಕೆ ಜೈಕಾರ ಹಾಕಿ, ನಿಮ್ಮ ನಾಯಕರಿಗೆ ಜೈಕಾರ ಹಾಕಿ, ಅದು ಬಿಟ್ಟು ಪಾಕಿಸ್ತಾನ ಜಿಂದಾಬಾದ್ ಎಂದು ನಿಮ್ಮ ಪಕ್ಷದ ಕಾರ್ಯಕರ್ತರು ಘೋಷಣೆ ಕೂಗುತ್ತಾರಲ್ಲ ಸಿಎಂ ಸಿದ್ದರಾಮಯ್ಯ ಅವರೇ, ಮೂರು ರಾಜ್ಯಸಭೆ ಸ್ಥಾನ ಗೆದ್ದ ಮಾತ್ರಕ್ಕೆ ಮತೊಮ್ಮೆ ದೇಶ ವಿಭಜನೆ ಮಾಡಬಹುದು ಎಂದು ಕೊಂಡಿದ್ದೀರಾ? ಪಾಕಿಸ್ತಾನ ಜಿಂದಾಬಾದ್ ಎಂಬುದೇ ಕಾಂಗ್ರೆಸ್ ಪಕ್ಷದ ಆತ್ಮಸಾಕ್ಷಿನಾ ಡಿಕೆ ಶಿವಕುಮಾರ್ ಅವರೇ?” ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಪ್ರಕರಣ ಬೆಳಕಿಗೆ ಬಂದ ಬಳಿಕ ಬೆಂಗಳೂರು ಪೊಲೀಸರು ವೈರಲ್ ವೀಡಿಯೊವನ್ನು ಪರಿಶೀಲಿಸುತ್ತಿದ್ದಾರೆ. ನಾವು ವೀಡಿಯೊವನ್ನು ಪಡೆದುಕೊಂಡಿದ್ದೇವೆ ಮತ್ತು ಅದನ್ನು ವಿಶ್ಲೇಷಿಸುತ್ತಿದ್ದೇವೆ” ಎಂದು ಬೆಂಗಳೂರು ಪೊಲೀಸ್ ಆಯುಕ್ತ ಬಿ ದಯಾನಂದ ಮಾಧ್ಯಮಕ್ಕೆ ತಿಳಿಸಿದ್ದಾರೆ.