ಉಡುಪಿ: ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆಗೆ ದಾಳಿ ನಡೆಸಿದ್ದ ಮಣಿಪಾಲ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧನ ಮಾಡಿರುವ ಘಟನೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ವಿದ್ಯಾರತ್ನ ನಗರದಲ್ಲಿ ನಡೆದಿದೆ.
ಭವಾನಿ ಹೆಸರಿನ ಮನೆಯಲ್ಲಿ ಅನೈತಿಕ ವೇಶ್ಯಾವಾಟಿಕೆ ನಡೆಯುತ್ತಿದ್ದ ಸಂದರ್ಭ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಕಾರ್ಯಾಚರಣೆಯಲ್ಲಿ ವೇಶ್ಯಾವಾಟಿಕೆಯ ಜಾಲಕ್ಕೆ ಸಿಲುಕಿದ್ದ 5 ಮಂದಿ ಯುವತಿಯರನ್ನು ರಕ್ಷಣೆ ಮಾಡಲಾಗಿದೆ. ಈ ವೇಳೆ ವೇಶ್ಯಾವಾಟಿಕೆ ವ್ಯವಹಾರ ನಡೆಸುತ್ತಿದ್ದ ಅಬ್ದುಲ್ ಸಲಾಮತ್, ಚಂದ್ರಹಾಸ ಎಂಬ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ರಕ್ಷಣೆ ಮಾಡಿದ ಐವರು ಯುವತಿಯರಲ್ಲಿ ಮೂವರು ಬೆಂಗಳೂರಿಗೆ ಸೇರಿದ್ದು, ಇನ್ನಿಬ್ಬರು ಮಹಾರಾಷ್ಟ್ರದ ನಾಸಿಕ್ ಹಾಗೂ ಮುಂಬೈ ನಿವಾಸಿಗಳಾಗಿದ್ದಾರೆ. ದಂಧೆಗೆ ಬಳಸುತ್ತಿದ್ದ 4 ಮೊಬೈಲ್ ಫೋನ್, 1 ಕಾರು , 2 ಮೋಟಾರ್ ಸೈಕಲ್ ಹಾಗೂ 10,000 ಸಾವಿರ ರೂಪಾಯಿ ನಗದು ಹಣವನ್ನು ಪೊಲೀಸರು ಸ್ವಾಧೀನ ಪಡಿಸಿಕೊಂಡಿದ್ದಾರೆ.
ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಅನೈತಿಕ ಚಟುವಟಿಕೆಗೆ ಕೊಠಡಿಗಳನ್ನು ಒದಗಿಸಿದ ಪ್ರಮುಖ ಆರೋಪಿ ಖಾಲಿದ್ ಸ್ಥಳದಿಂದ ಪರಾರಿಯಾಗಿದ್ದಾನೆ. ಪೊಲೀಸರು ಶಾಂತಿನಗರದ ಮನೆಯ ಮೇಲೂ ದಾಳಿ ನಡೆಸಿದ್ದು, ವೇಶ್ಯಾವಾಟಿಕೆಗೆ ಬಳಸಿದ ಮನೆಯನ್ನು ಜಪ್ತಿ ಮಾಡಿದ್ದಾರೆ.