ಕೋಟ: ಕೊರಗ ಸಮುದಾಯದ ಮನೆಯೊಂದರಲ್ಲಿ ನಡೆಯುತ್ತಿದ್ದ ಮೆಹಂದಿ ಕಾರ್ಯಕ್ರಮಕ್ಕೆ ಪೊಲೀಸರು ದಾಳಿ ನಡೆಸಿ, ಮನೆಮಂದಿಯ ಮೇಲೆ ಲಾಠಿ ಚಾರ್ಜ್ ನಡೆಸಿರುವ ಆರೋಪಕೇಳಿ ಬಂದಿದೆ.
ಕುಂದಾಪುರ ತಾಲೂಕಿನ ಕೋಟತಟ್ಟು ಗ್ರಾಮದ ಕೊರಗ ಸಮುದಾಯದ ಮನೆಯಲ್ಲಿ ನಿನ್ನೆ ರಾತ್ರಿ ಮೆಹಂದಿ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಅಲ್ಲಿಗೆ ಬಂದ ಕೋಟ ಠಾಣಾ ಪೊಲೀಸರು, ಡಿಜೆ, ಲೈಟ್ ಆಫ್ ಮಾಡಿ ಮಧುಮಗ, ಹೆಣ್ಣುಮಕ್ಕಳೆಂದು ಲೆಕ್ಕಿಸದೇ ಲಾಠಿ ಬೀಸಿದ್ದಾರೆ ಎಂದು ಮನೆಯವರು ಆರೋಪಿದ್ದಾರೆ.
ಪೊಲೀಸರನ್ನು ಅಮಾನತು ಮಾಡಿ: ಆಗ್ರಹ
ಕೋಟಾ ಠಾಣಾಧಿಕಾರಿ ಸಂತೋಷ್ ಮತ್ತು ಸಿಬ್ಬಂದಿ ಮನೆಯವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಲಾಠಿ ಚಾರ್ಜ್ ಮಾಡಿದ್ದಾರೆ. ಠಾಣಾಧಿಕಾರಿ ಹಾಗೂ ಸಿಬ್ಬಂದಿಯನ್ನು ಕೂಡಲೇ ಅಮಾನತುಗೊಳಿಸಿ, ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ ಮಾಸ್ತರ್ ಆಗ್ರಹಿಸಿದ್ದಾರೆ.
ಈ ಕೂಡಲೇ ಪೊಲೀಸರನ್ನು ಅಮಾನತು ಮಾಡದಿದ್ದರೆ, ಉಡುಪಿ ಎಸ್ಪಿ ಕಚೇರಿ ಮುಂದೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.