ವಿಶ್ರಾಂತಿ ಪಡೆಯಲು ಸಮಯವಿಲ್ಲ, 2024 ಕ್ಕೆ ಸಿದ್ಧರಾಗಿ: ಯೋಗಿ ಸಂಪುಟ ಭೇಟಿಯಾದ ಪ್ರಧಾನಿಯಿಂದ ‘ಬುಲ್ಡೋಜರ್ ಅಭಿಯಾನಕ್ಕೆ’ ಶ್ಲಾಘನೆ

ಉತ್ತರ ಪ್ರದೇಶ: ಸೋಮವಾರ ಸಂಜೆ ಲಕ್ನೋನಲ್ಲಿ ಯೋಗಿ ಆದಿತ್ಯನಾಥ್ ಸಂಪುಟದೊಂದಿಗೆ ಚಿಂತನ-ಮಂಥನ ಸಭೆ ನಡೆಸಿದ ಪ್ರಧಾನಿ ಮೋದಿ, ಉತ್ತಮ ಆಡಳಿತದಿಂದ ಮಾತ್ರ ಅಧಿಕಾರದ ಹಾದಿ ಸುಗಮವಾಗುತ್ತದೆ ಎಂದು ಕಿವಿಮಾತು ಹೇಳಿದ್ದಾರೆ.

ಯೋಗಿ ಸಂಪುಟದ ಸಚಿವರೊಂದಿಗೆ ಮಾತನಾಡಿದ ಅವರು, ರಾಜ್ಯದ ಎಲ್ಲಾ ಸಚಿವರು ಸಾರ್ವಜನಿಕರ ಸೇವೆಗೆ ಮುಡುಪಾಗಿರಬೇಕು. ವಿಶ್ರಾಂತಿಗೆ ಸಮಯ ಉಳಿದಿಲ್ಲ, 2024 ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಎಲ್ಲರೂ ಸಿದ್ಧತೆಗಳನ್ನು ಪ್ರಾರಂಭಿಸಬೇಕು ಎಂದಿದ್ದಾರೆ ಎಂದು ನ್ಯೂಸ್ 18 ವರದಿ ಮಾಡಿದೆ.

ಅಪರಾಧಿಗಳ ವಿರುದ್ಧ ಯೋಗಿ ಆದಿತ್ಯನಾಥ್ ಸರ್ಕಾರದ ಬುಲ್ಡೋಜರ್ ಅಭಿಯಾನವನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ ಎಂದೂ ಮೂಲಗಳು ತಿಳಿಸಿವೆ. ಯೋಗಿ ಆದಿತ್ಯನಾಥ್ ಅವರ ಆಳ್ವಿಕೆಯಲ್ಲಿ ರಾಜ್ಯದ ಕಾನೂನು-ಸುವ್ಯವಸ್ಥೆ ಸುಧಾರಿಸಿದೆ, ಇದಕ್ಕಾಗಿ ಅವರು ಮುಖ್ಯಮಂತ್ರಿಯನ್ನು ಅಭಿನಂದಿಸಿದ್ದಾರೆ ಮತ್ತು ಕೋವಿಡ್ ನ ಸಮರ್ಥ ನಿರ್ವಹಣೆಗಾಗಿ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಪ್ರಯತ್ನಗಳನ್ನು ಕೂಡಾ ಶ್ಲಾಘಿಸಿದ್ದಾರೆ ಎನ್ನಲಾಗಿದೆ.

ಮೂಲಗಳ ಪ್ರಕಾರ ತಮ್ಮ ಕ್ಷೇತ್ರಗಳಲ್ಲಿ ಸಾಧ್ಯವಾದಷ್ಟು ಸಮಯವನ್ನು ಕಳೆಯಲು ಮತ್ತು ಸರ್ಕಾರದ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಹಾಗೂ ಸರಕಾರದ ಯೋಜನೆಗಳು ಅರ್ಹರಿಗೆ ತಲುಪುವಂತೆ ನೋಡಿಕೊಳ್ಳಬೇಕು ಎಂದು ಸಚಿವರಿಗೆ ತಿಳಿಸಿದ್ದಾರೆ.