ಅಬುಧಾಬಿ (ಯುಎಇ):ಯುಎಇ ಮತ್ತು ಭಾರತ ನಡುವೆ ಆಯಾ ಕರೆನ್ಸಿ ಮೂಲಕ ವಹಿವಾಟು, ವ್ಯಾಪಾರ, ಹೂಡಿಕೆ, ಇಂಧನ, ಆಹಾರ ಭದ್ರತೆ, ವಿಜ್ಞಾನ ಮತ್ತು ತಂತ್ರಜ್ಞಾನ, ಶಿಕ್ಷಣ, ಹಣಕಾಸು, ರಕ್ಷಣೆ, ಭದ್ರತೆ ಸೇರಿದಂತೆ ಹಲವು ವಿಷಯಗಳಿಗೆ ಸಂಬಂಧಿಸಿದ ಒಪ್ಪಂದಗಳು ನಡೆದಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ)ಗೆ ಭೇಟಿ ನೀಡಿದ್ದು, ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಆತ್ಮೀಯವಾಗಿ ಸ್ವಾಗತ ಕೋರಿದರು.ಬಳಿಕ ಉಭಯ ನಾಯಕರು ದ್ವಿಪಕ್ಷೀಯ ಸಂಬಂಧ ವೃದ್ಧಿ ಕುರಿತು ವಿಸ್ತೃತ ಚರ್ಚೆ ನಡೆಸಿದರು.
ಭಾರತ ಮತ್ತು ಯುಎಇ ನಡುವಿನ ವ್ಯಾಪಾರವು ಶೇಕಡಾ 20 ರಷ್ಟು ಹೆಚ್ಚಳವಾಗಿದೆ. ಇದೇ ಮೊದಲ ಬಾರಿಗೆ 85 ಮಿಲಿಯನ್ ಡಾಲರ್ ಮೌಲ್ಯದಷ್ಟು ವಹಿವಾಟು ಪ್ರಗತಿ ಸಾಧಿಸಿದ್ದೇವೆ. ಮುಂದೆ ಅದು ಶೀಘ್ರದಲ್ಲೇ 100 ಮಿಲಿಯನ್ ಡಾಲರ್ ಗುರಿ ಸಾಧಿಸಲಿದ್ದೇವೆ. ಇದು ಸಾಧ್ಯವಾಗಿಸಿದಲ್ಲಿ G20 ದೇಶಗಳಿಗಿಂತ ಮೊದಲು ಈ ಮೈಲಿಗಲ್ಲನ್ನು ದಾಟಬಹುದು. ಯುಎಇನಲ್ಲಿ ನಡೆಯುವ COP-28 ಶೃಂಗಸಭೆಯಲ್ಲಿ ಭಾಗವಹಿಸಲು ನಿರ್ಧರಿಸಲಾಗಿದೆ ಎಂದು ಪ್ರಧಾನಿ ಹೇಳಿದರು.ಇದೇ ವೇಳೆ ಮಾತನಾಡಿದ ಪ್ರಧಾನಿ ಮೋದಿ ಅವರು, ಯುಎಇ ಅಧ್ಯಕ್ಷ ನಹ್ಯಾನ್ ಅವರನ್ನು ಅಧ್ಯಕ್ಷೀಯ ಭವನ ಕಸರ್ ಅಲ್ ವತನ್ನಲ್ಲಿ ಭೇಟಿಯಾಗಿದ್ದು, ತುಂಬಾ ಸಂತೋಷ ತಂದಿದೆ. ಇದು ನನ್ನ ಎರಡನೇ ಮನೆ ಎಂದು ಭಾಸವಾಗುತ್ತಿದೆ. ನೀವು ಕೋರಿದ ಸ್ವಾಗತಕ್ಕೆ ಧನ್ಯವಾದಗಳು ಎಂದು ಹೇಳಿದರು.
ಕಳೆದ ವರ್ಷ ಮಾಡಿಕೊಳ್ಳಲಾದ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದವನ್ನು(ಸಿಇಪಿಎ) ಮುಂದುವರಿಸಲಾಗಿದೆ. ಯುಎಇ ಸಹಕಾರ ಇಲ್ಲದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ. ಕಳೆದ ಕೆಲವು ವರ್ಷಗಳಲ್ಲಿ ಉಭಯ ರಾಷ್ಟ್ರಗಳ ಸಂಬಂಧಗಳು ವಿಸ್ತರಿಸಿವೆ. ಅರಬ್ ರಾಷ್ಟ್ರದಿಂದ ದೊಡ್ಡ ಕೊಡುಗೆಗಳು ಸಿಕ್ಕಿದೆ. ನೇರ ದೃಷ್ಟಿ ಮತ್ತು ಸ್ಪಷ್ಟ ಚಿಂತನೆಯೇ ಈ ರಾಷ್ಟ್ರದ ದೊಡ್ಡ ಶಕ್ತಿಯಾಗಿದೆ. ಈ ಕಾರಣಕ್ಕಾಗಿಯೇ ನಿಜವಾದ ಸ್ನೇಹಿತನಂತೆ ಕಾಣಿಸುತ್ತಾರೆ ಎಂದು ಪ್ರಧಾನಿ ಮೋದಿ ಬಣ್ಣಿಸಿದರು.
ಬುರ್ಜ್ ಖಲೀಫಾ ಮೇಲೆ ಮೋದಿ ಚಿತ್ರ: ವಿಶ್ವ ವಿಖ್ಯಾತ ಬುರ್ಜ್ ಖಲೀಫಾದ ಮೇಲೆ ದೇಶದ ರಾಷ್ಟ್ರಧ್ವಜದ ತ್ರಿವರ್ಣವನ್ನು ಬೆಳಗಿಸುವುದರ ಜೊತೆಗೆ ಪ್ರಧಾನಿ ಮೋದಿ ಅವರ ಚಿತ್ರವನ್ನೂ ಪ್ರದರ್ಶಿಸುವುದರ ಮೂಲಕ ಅವರಿಗೆ ಭವ್ಯ ಸ್ವಾಗತ ಕೋರಲಾಯಿತು. ಗಗನಚುಂಬಿ ಕಟ್ಟಡ ತುಂಬೆಲ್ಲಾ ಪ್ರಧಾನಿ ಮೋದಿಯವರ ಚಿತ್ರವೇ ಆವರಿಸಿಕೊಂಡಿತ್ತು.
ಸಮ್ಮೇಳನಕ್ಕೆ ಸಹಕಾರ: ನವೆಂಬರ್ 28ರಿಂದ ಡಿಸೆಂಬರ್ 12ರವರೆಗೆ ದುಬೈನ ಎಕ್ಸೋ ಸಿಟಿಯಲ್ಲಿ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮ್ಮೇಳನ (ಸಿಒಪಿ28) ನಡೆಯಲಿದೆ. ಇದರ ನೇತೃತ್ವವನ್ನು ಯುಎಇ ಹೊತ್ತಿದ್ದು, ಸಮ್ಮೇಳನದ ಯಶಸ್ಸಿಗೆ ಭಾರತ ಸಂಪೂರ್ಣ ಸಹಕಾರ ನೀಡಲಿದೆ ಎಂದು ಮೋದಿ ಭರವಸೆ ನೀಡಿದ್ದಾರೆ.
ಉಭಯ ರಾಷ್ಟ್ರಗಳ ಪಾಲುದಾರಿಕೆಯನ್ನು ಬಲಪಡಿಸಲು ಹೊಸ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಅದರಲ್ಲಿ ಕರೆನ್ಸಿಗಳ ವಹಿವಾಟು ಕುರಿತ ಇಂದಿನ ಒಡಂಬಡಿಕೆ ಕೂಡ ಒಂದಾಗಿದೆ. ಇದು ನಮ್ಮ ಬಲವಾದ ಆರ್ಥಿಕ ಸಹಕಾರ ಮತ್ತು ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದರು.ಎರಡೂ ದೇಶಗಳು ವ್ಯಾಪಾರ, ಹೂಡಿಕೆ, ಇಂಧನ, ಆಹಾರ ಭದ್ರತೆ, ವಿಜ್ಞಾನ ಮತ್ತು ತಂತ್ರಜ್ಞಾನ, ಶಿಕ್ಷಣ, ಹಣಕಾಸು, ರಕ್ಷಣೆ, ಭದ್ರತೆ ಸೇರಿದಂತೆ ಹಲವು ವಿಷಯಗಳಿಗೆ ಸಂಬಂಧಿಸಿದ ಒಪ್ಪಂದಗಳಿಗೆ ಸಹಿ ಹಾಕಿವೆ.