ಗುಜರಾತ್‌ನ ರೋಬೋಟಿಕ್ಸ್ ಗ್ಯಾಲರಿಯಲ್ಲಿ ರೋಬೋಟ್‌ ನೀಡಿದ ಚಹಾ ಸವಿದ ಪ್ರಧಾನಿ ಮೋದಿ

ಅಹಮದಾಬಾದ್: ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ರೊಬೊಟಿಕ್ಸ್ ಗ್ಯಾಲರಿಯಲ್ಲಿ ರೋಬೋಟ್‌ ನೀಡಿದ ಒಂದು ಕಪ್ ಚಹಾವನ್ನು ಆನಂದಿಸಿದರು. ಬುಧವಾರ ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ಸೈನ್ಸ್ ಸಿಟಿಯಲ್ಲಿ ರೋಬೋಟ್ ಪ್ರದರ್ಶನಕ್ಕೆ ಭೇಟಿ ನೀಡಿದ ಪ್ರಧಾನಿ, ವೈಬ್ರೆಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆಯನ್ನು ಉದ್ಘಾಟಿಸಿದರು.

ರೋಬೋಟಿಕ್ಸ್ ಗ್ಯಾಲರಿಯು DRDO ರೋಬೋಟ್‌ಗಳು, ಮೈಕ್ರೋಬೋಟ್‌ಗಳು, ಕೃಷಿ ರೋಬೋಟ್, ವೈದ್ಯಕೀಯ ರೋಬೋಟ್‌ಗಳು, ಸ್ಪೇಸ್ ರೋಬೋಟ್ ಮತ್ತು ಹೆಚ್ಚಿನದನ್ನು ಪ್ರದರ್ಶಿಸುತ್ತದೆ. ಈ ಆಕರ್ಷಕ ಪ್ರದರ್ಶನಗಳ ಮೂಲಕ, ಆರೋಗ್ಯ ರಕ್ಷಣೆ, ಉತ್ಪಾದನೆ ಮತ್ತು ದೈನಂದಿನ ಜೀವನದಲ್ಲಿ ರೋಬೋಟಿಕ್ಸ್‌ನ ಪರಿವರ್ತಕ ಶಕ್ತಿಯು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಪ್ರಧಾನಿ ಮೋದಿ ಎಕ್ಸ್ ನಲ್ಲಿ ಹೇಳಿದ್ದಾರೆ.

ಪ್ರಧಾನಿಯವರೊಂದಿಗೆ ಗುಜರಾತ್ ರಾಜ್ಯಪಾಲ ಆಚಾರ್ಯ ದೇವವ್ರತ್ ಮತ್ತು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಜೊತೆಯಾದರು.

ಈ ಸಂದರ್ಭದಲ್ಲಿ ಅವರು ಅಕ್ವಾಟಿಕ್ ಗ್ಯಾಲರಿಯನ್ನು ಕೂಡಾ ಸಂದರ್ಶಿಸಿದರು.

ಗುಜರಾತ್‌ನ ಛೋಟಾ ಉದೇಪುರ್‌ನಲ್ಲಿ 22 ಜಿಲ್ಲೆಗಳಲ್ಲಿ ಗ್ರಾಮ ವೈ-ಫೈ ಸೌಲಭ್ಯಗಳು ಸೇರಿದಂತೆ ₹ 5,206 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ.