ಪ್ರಧಾನಿ ಮೋದಿ ಆಡಳಿತ ದೇಶಕ್ಕೆ ಹೊಸ ದಿಸೆ ಕೊಟ್ಟಿದೆ, ಯಶಸ್ವಿ ನಾಯಕತ್ವದಿಂದ ಮಾತ್ರ ದೇಶದ ಅಭಿವೃದ್ಧಿ  ಸಾಧ್ಯ

ಉಡುಪಿ:ಹಿಂದೆ ನಮ್ಮ ದೇಶದ ನಾಯಕತ್ವ ಮಾತ್ರ ಅಲ್ಲ, ಜನರ ರಕ್ತದಲ್ಲಿಯೇ ಭ್ರಷ್ಟಚಾರ ಇತ್ತು. ಅದು ಈಗ ಸಂಪೂರ್ಣ ನಿವಾರಣೆ ಆಗಿದೆ ಎಂದು ಹೈಕೋರ್ಟ್‌ನ ವಕೀಲ ಸಂದೇಶ್‌ ಕುಮಾರ್‌ ಶೆಟ್ಟಿ ಹೇಳಿದರು.
ಉಡುಪಿ ಪ್ರೇರಣಾ ಸಂಘಟನೆಯ ವತಿಯಿಂದ ಕಿನ್ನಿಮುಲ್ಕಿ ವೀರಭದ್ರ ಕಲಾಭವನದಲ್ಲಿ ಗುರುವಾರ ಆಯೋಜಿಸಿದ್ದ ‘ಬದಲಾಗುತ್ತಿರುವ ಭಾರತ’ ಎಂಬ ವಿಷಯದ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರಾಷ್ಟ್ರವನ್ನು ಪ್ರಗತಿ ಪಥದತ್ತಾ ಕೊಂಡೊಯ್ಯುವುದರ ಜತೆಗೆ ಅದಕ್ಕೆ ಸಂಪೂರ್ಣ ಶಕ್ತಿ ತುಂಬಿದಾಗ ಮಾತ್ರ ರಾಜಕೀಯ ನಾಯಕತ್ವ ಯಶಸ್ವಿಯಾಗುತ್ತದೆ. ಸ್ವಾತಂತ್ರ್ಯ ಪಡೆದ ಬಳಿಕ ಭಾರತ ಎಷ್ಟು ಎತ್ತರಕ್ಕೆ ಸಾಗಬೇಕಾಗಿತ್ತೊ ಅಷ್ಟು ಎತ್ತರಕ್ಕೆ ತಲುಪಲು ಸಾಧ್ಯವಾಗಿಲ್ಲ. ನಮ್ಮಲ್ಲಿ ಮೂಲಭೂತ ಸೌಕರ್ಯ, ಸಂಪನ್ಮೂಲ, ಸಂಸ್ಕೃತಿ, ಬುದ್ಧಿವಂತಿಕೆಗೆ ಯಾವುದೇ ಕೊರತೆ ಇರಲಿಲ್ಲ. ಆದರೆ ರಾಷ್ಟ್ರದ ನಾಯಕತ್ವದಲ್ಲಿ ಕೊರತೆ ಇತ್ತು ಎಂದರು.
ಜನಸಂಖ್ಯೆಯನ್ನು ನಿಯಂತ್ರಿಸುವುದರಲ್ಲಿ ವಿಫಲ. ಮತಬ್ಯಾಂಕ್‌ಗಾಗಿ ಜನಸಂಖ್ಯೆಯನ್ನು ಬೆಳೆಸುವ ಪ್ರಕ್ರಿಯೆ ಮಾಡಿದರು. ಮೂಲಭೂತ ವ್ಯವಸ್ಥೆ, ಶಿಕ್ಷಣ, ಆರೋಗ್ಯ, ಜಾತಿ ಆಧಾರಿತ ರಾಜಕಾರಣ ಇದೆಲ್ಲ ಕಾರಣದಿಂದ ನಮ್ಮ ದೇಶ ಅಭಿವೃದ್ಧಿಯಲ್ಲಿ ಹಿಂದೆ ಉಳಿಯುವಂತಾಯಿತು. ಭಾರತ ಎಂದೋ ಪ್ರಪಂಚದ ನಾಯಕತ್ವವನ್ನು ಹಿಡಿಯಬೇಕಾಗಿತ್ತು. ಅದು ಈಡೇರಲಿಲ್ಲ, ಇದಕ್ಕೆಲ್ಲ ಪ್ರಮುಖ ಕಾರಣ ಈ ದೇಶವನ್ನು ಆಳಿದ ಪಕ್ಷ ಹಾಗೂ ಅದರ ನಾಯಕರು ಎಂದು ದೂರಿದರು.
ಪ್ರಧಾನಿ ನರೇಂದ್ರ ಮೋದಿ ಅವರ 4 ವರ್ಷ 10 ತಿಂಗಳ ಆಡಳಿತ ಭಾರತಕ್ಕೆ ಹೊಸ ದಿಸೆಯನ್ನು ಕೊಟ್ಟಿದೆ. ಪ್ರಧಾನಿ ಮೋದಿ ಅವರ 165 ದಿನಗಳ ವಿದೇಶ ಪ್ರವಾಸದ ಫಲದಿಂದಲೇ ಇಂದು ಪಾಕಿಸ್ತಾನ ಅಂತರರಾಷ್ಟ್ರೀಯ ಮಟ್ಟದಲ್ಲಿ ಮೂಲೆಗುಂಪಾಗಿದೆ. ಅಲ್ಲದೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ವಿದೇಶಗಳ ಜತೆಗೆ ನಾವು ಉತ್ತಮ ಬಾಂಧವ್ಯ ಹೊಂದುವಂತಾಗಿದೆ. ವಿದೇಶಾಂಗ ನೀತಿ ಬಲಯುತಗೊಂಡಿದೆ. ಮೋದಿ ಅವರು ನಮ್ಮ ರಾಷ್ಟ್ರದ ಅಸ್ತಿತ್ವವನ್ನು ಇಡೀ ಪ್ರಪಂಚಕ್ಕೆ ತೋರಿಸಿಕೊಟ್ಟಿದ್ದಾರೆ. ಈಗ ನಮ್ಮ ಭಾರತ ಬದಲಾಗುತ್ತಿದೆ. ಇದಕ್ಕೆ ನಮ್ಮ ದೇಶದ ಬಲಿಷ್ಠ ನಾಯಕತ್ವವೇ ಕಾರಣ ಎಂದು ಅಭಿಪ್ರಾಯಪಟ್ಟರು. ಸಮರ್ಥ ಭಾರತ ಟ್ರಸ್ಟ್‌ನ ವಿಶ್ವಸ್ಥ ರಾಧಾಕೃಷ್ಣ ಹೊಳ್ಳ ಉಪಸ್ಥಿತರಿದ್ದರು.