ಇಸ್ರೇಲಿನಲ್ಲಿ ಮತ್ತೊಮ್ಮೆ ಬೆಂಜಮಿನ್ ನೆತನ್ಯಾಹು ಸರ್ಕಾರ್: ಮಿತ್ರನಿಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ

ಟೆಲ್ ಅವೀವ್: ಇಸ್ರೇಲ್ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು ಮತ್ತೊಮ್ಮೆ ಆಡಳಿತ ನಡೆಸಲು ಸಜ್ಜಾಗಿರುವ ಬೆಂಜಮಿನ್ ನೆತನ್ಯಾಹು ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಪ್ರಧಾನಿ ಮೋದಿ ಅವರು ಟ್ವಿಟರ್‌ನಲ್ಲಿ ಹೀಬ್ರೂ ಭಾಷೆಯಲ್ಲಿ ಅಭಿನಂದನೆ ಸಲ್ಲಿಸಿದ್ದು, “ಭಾರತ ಮತ್ತು ಇಸ್ರೇಲ್ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ಗಾಢಗೊಳಿಸಲು ನಮ್ಮ ಜಂಟಿ ಪ್ರಯತ್ನಗಳನ್ನು ಮುಂದುವರಿಸಲು ನಾನು ಎದುರು ನೋಡುತ್ತಿದ್ದೇನೆ” ಎಂದು ಹೇಳಿದ್ದಾರೆ.

ಭಾರತ ಮತ್ತು ಇಸ್ರೇಲ್‌ನ ಕಾರ್ಯತಂತ್ರದ ಸಹಭಾಗಿತ್ವಕ್ಕೆ ನೀಡಿದ ಪ್ರಮುಖ ಕೊಡುಗೆಗಾಗಿ ಅವರು ನಿರ್ಗಮಿಸುತ್ತಿರುವ ಇಸ್ರೇಲಿ ಪ್ರಧಾನಿ ಯೈರ್ ಲ್ಯಾಪಿಡ್ ಅವರಿಗೂ ಧನ್ಯವಾದ ಅರ್ಪಿಸಿದ್ದಾರೆ.

ಇಸ್ರೇಲಿನಲ್ಲಿ ಎರಡು ದಿನಗಳ ಹಿಂದೆ ಪ್ರಧಾನಿ ಪದವಿಗಾಗಿ ಚುನಾವಣೆಗಳು ನಡೆದಿದ್ದು, ಇಸ್ರೇಲ್‌ನ ಕೇಂದ್ರ ಚುನಾವಣಾ ಸಮಿತಿಯು ಗುರುವಾರ 25 ನೇ ನೆಸೆಟ್‌ಗೆ ಸೀಟುಗಳ ಅಂತಿಮ ಹಂಚಿಕೆಯನ್ನು ಘೋಷಿಸಿದೆ. ನೆತನ್ಯಾಹು ನೇತೃತ್ವದ ಬಣವು 120 ಸದಸ್ಯರ ನೆಸೆಟ್‌ನಲ್ಲಿ 64 ಸ್ಥಾನಗಳನ್ನು ಗೆದ್ದಿದೆ ಮತ್ತು ಇದು ಇಸ್ರೇಲಿ ಸಂಸತ್ತಿನಲ್ಲಿ ಬಹುಮತಕ್ಕೆ ಸಾಕಾಗುತ್ತದೆ.

ಅಧ್ಯಕ್ಷ ಐಸಾಕ್ ಹೆರ್ಜೋಗ್ ಅವರು ನವೆಂಬರ್ 9 ರಂದು ಅಧಿಕೃತವಾಗಿ ಫಲಿತಾಂಶಗಳನ್ನು ಪ್ರಮಾಣೀಕರಿಸಿದ ನಂತರ ಹೊಸ ಸರ್ಕಾರವನ್ನು ರಚಿಸುವ ಕುರಿತು ರಾಜಕಾರಣಿಗಳೊಂದಿಗೆ ಸಮಾಲೋಚನೆಯನ್ನು ಪ್ರಾರಂಭಿಸಲಾಗುತ್ತದೆ ಎಂದು ವರದಿಯಾಗಿದೆ.