ಉಡುಪಿ: ಭಾರತವನ್ನು ವಿಶ್ವವೇ ಗುರುತಿಸುವಂತೆ ಮಾಡಿದ್ದು ಎನ್ ಡಿಎ ಸರ್ಕಾರದ ದೊಡ್ಡ ಸಾಧನೆ. ಸ್ವಾತಂತ್ರ್ಯಾನಂತರ ಇದು ಸಾಧ್ಯವಾಗಿರಲಿಲ್ಲ. ಕಳೆದ ಐದು ವರ್ಷಗಳಿಂದ ಎನ್ ಡಿಎ ಸರ್ಕಾರ ಉತ್ತಮ ಕೆಲಸ ಮಾಡಿದೆ. ಅಲ್ಲದೆ ಸರ್ಕಾರದ ಕಾರ್ಯವೈಖರಿಯ ಬಗ್ಗೆ ಜನರಿಗೆ ಖುಷಿ ಇದೆ. ಹಾಗಾಗಿ ಮತ್ತೊಮ್ಮೆ ಮೋದಿ ಪ್ರಧಾನಿಯಾಗಲಿ ಎಂದು ಜನತೆ ಬಯಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್ ಮೋದಿ ಹೇಳಿದರು.
ಅವರು ಇಂದು ಉಡುಪಿ ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಆರ್ಥಿಕ ನೀತಿಯನ್ನು ಜನರು ಖುಷಿಯಿಂದ ಸ್ವೀಕರಿಸುತ್ತಿದ್ದಾರೆ. ಸರ್ಕಾರದ ಕಾರ್ಯವೈಖರ ಬಗ್ಗೆ ಜನರಿಗೆ ಸಂತೃಪ್ತಿ ಇದೆ ಎಂದರು.
ಕೇಂದ್ರ ಸರ್ಕಾರ ಬಜೆಟ್ ನಲ್ಲಿ ರೈತರಿಗೆ ಅನೇಕ ಕೊಡುಗೆ ನೀಡಿದೆ. ಆದರೆ ವಿರೋಧ ಪಕ್ಷದವರು ದಿನಕ್ಕೆ ಹದಿನೇಳು ರುಪಾಯಿಯಷ್ಟೇ ನೀಡಿದೆ ಅಂತಾರೆ. ಇದು ಸತ್ಯಕ್ಕೆ ದೂರವಾದ ಮಾತು. ಅಧಿಕಾರ ನಡೆಸುವಾಗ ಕಾಂಗ್ರೇಸಿಗರಿಗೆ ರೈತರ ನೆನಪಾಗಿಲ್ಲ. ಈಗ ರೈತರ ಜಪ ಮಾಡುತ್ತಿದ್ದಾರೆ. ಕೃಷ್ಣನಿಗೆ ಸುಧಾಮ ಅವಲಕ್ಕಿ ಕೊಟ್ಟಂತೆ, ರೈತರಿಗೆ ಈ ಸರ್ಕಾರ ಅಲ್ಪವಾದರೂ ಕೊಟ್ಟಿತಲ್ಲ, ಅದೇ ಖುಷಿ ಎಂದು ತಿಳಿಸಿದರು.
ನಾನು ಯಾವತ್ತೂ ಸಹೋದರ ಮೋದಿಯನ್ನು ಟೀಕಿಸಿರಲಿಲ್ಲ. ಅದೆಲ್ಲಾ ಕೇವಲ ಊಹಾಪೋಹ ಅಷ್ಟೇ. ನಾನು ಮಮತಾ ಬ್ಯಾನರ್ಜಿಯನ್ನು ಬೆಂಬಲಿಸಿದ್ದೆ ಅನ್ನೋದು ಸುಳ್ಳು. ಸಹೋದರ ನರೇಂದ್ರ ಮೋದಿಯನ್ನು ಬಿಟ್ಟು ನಾನ್ಯಾಕೆ ಮಮತಾ ಬ್ಯಾನರ್ಜಿಯನ್ನು ಬೆಂಬಲಿಸಲಿ? ಎಂದು ಪ್ರಶ್ನಿಸಿದರು.
ಪ್ರಿಯಾಂಕಾ ಗಾಂಧಿ ರಾಜಕೀಯ ಪ್ರವೇಶದಿಂದ ಬದಲಾವಣೆಯ ಗಾಳಿ ಬೀಸುವುದಿಲ್ಲ. ದೇಶದಲ್ಲಿ ಬಹಳಷ್ಟು ಪ್ರಿಯಾಂಕಾಗಳಿದ್ದಾರೆ. ಒಬ್ಬ ಪ್ರಿಯಾಂಕಾ ಬಂದರೆ ಏನಾಗುತ್ತೆ? ಎಂದು ಟೀಕಿಸಿದರು.
ರೇಷನ್ ಅಂಗಡಿ ಡೀಲರ್ ಗಳ ರಾಷ್ಡೀಯ ಒಕ್ಕೂಟದ ಉಪಾಧ್ಯಕ್ಷರು ಆಗಿರುವ ಪ್ರಹ್ಲಾದ್ ಅವರು, ಕೃಷ್ಣನದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಕೆ ಮಾಡಿದರು. ಬಳಿಕ ಮಠದ ಗೋಶಾಲೆಗೆ ಭೇಟಿ ನೀಡಿ ಮಾಹಿತಿ ಪಡೆದರು. ಇದೇ ಮೊದಲ ಬಾರಿಗೆ ಮಠಕ್ಕೆ ಭೇಟಿ ಕೊಡುತ್ತಿದ್ದೇನೆ. ಇದೊಂದು ಧಾರ್ಮಿಕ ಉದ್ದೇಶದ ಭೇಟಿ ನೀಡಿದ್ದು ಎಂದರು.