ನವದೆಹಲಿ: ಈ ಬಾರಿ ಹಬ್ಬಗಳಲ್ಲಿ ಖಾದಿ, ಕೈಮಗ್ಗ ಅಥವಾ ಕರಕುಶಲ ಉತ್ಪನ್ನಗಳ ಖರೀದಿಸಿ, ಹಬ್ಬದ ಖರೀದಿಯ ಎಲ್ಲಾ ದಾಖಲೆಗಳನ್ನು ಮುರಿಯಿರಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಕರೆ ನೀಡಿದ್ದಾರೆ.
ದೇಶದಲ್ಲಿ ಸಾಲು ಸಾಲು ಹಬ್ಬಗಳು ಬರಲಿದ್ದು, ದಸರಾ, ಧನ್ ತೇರಸ್ ಮತ್ತು ದೀಪಾವಳಿ ಹಬ್ಬಗಳಲ್ಲಿ, ವೋಕಲ್ ಫಾರ್ ಲೋಕಲ್ ಅಭಿಯಾನದ ಭಾಗವಾಗಿ, ಸ್ಥಳೀಯ ಉತ್ಪನ್ನಗಳನ್ನು ಅತಿ ಹೆಚ್ಚು ಖರೀದಿಸುವ ಮೂಲಕ ಸ್ಥಳೀಯ ಉತ್ಪನ್ನಗಳ ತಯಾರಕರು ಮತ್ತು ಅದರ ಮಾರಾಟಗಾರರು ಕೂಡಾ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡಿ. ಹಬ್ಬದಂದು ಇತರರಿಗೆ ಉಡುಗೊರೆಗಳನ್ನು ನೀಡುವಾಗಲೂ ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ ನೀಡಿ. ಖಾದಿ, ಕೈಮಗ್ಗ ಮತ್ತು ಕರಕುಲ ಸಾಮಾಗ್ರಿಗಳ ಖರೀದಿಯ ಎಲ್ಲಾ ದಾಖಲೆಗಳನ್ನು ಮುರಿಯಿರಿ ಎಂದು ಕರೆ ನೀಡಿದ ಮೋದಿ, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹೊತ್ತಿನಲ್ಲಿ ಭಾರತವನ್ನುಆತ್ಮನಿರ್ಭರರನ್ನಾಗಿಸುವ ಮೂಲಕ ಸ್ವಾಂತತ್ರ್ಯಕ್ಕಾಗಿ ಪ್ರಾಣ ತೆತ್ತವರಿಗೆ ನೈಜ ಶೃದ್ಧಾಂಜಲಿ ಅರ್ಪಿಸಿ ಎಂದಿದ್ದಾರೆ.
ಹಬ್ಬದ ಸಮಯದಲ್ಲಿ ಪಾಲಿಥೀನ್ ಬ್ಯಾಗ್ ಗಳನ್ನು ಬಳಸುವುದನ್ನು ಬಿಟ್ಟು, ಪ್ಲಾಸ್ಟಿಕೇತರ ವಸ್ತುಗಳಾದ ಸೆಣಬು, ಬಾಳೆದಿಂಡಿನ ನಾರು ಬಟ್ಟೆಯ ಚೀಲ ಮುಂತಾದವುಗಳನ್ನು ಬಳಸಿ ತಮ್ಮ ಮತ್ತು ಪರಿಸರದ ಆರೋಗ್ಯದ ಕಾಳಜಿ ವಹಿಸುವಲ್ಲಿ ನೆರವಾಗಿ ಎಂದು ಅವರು ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.