ನವದೆಹಲಿ: ರಾಮಲಲ್ಲಾನನ್ನು ಕಣ್ತುಂಬಿಕೊಳ್ಳಲು ಅಯೋಧ್ಯೆಯ ರಾಮ ಮಂದಿರಕ್ಕೆ ಲಕ್ಷಾಂತರ ಜನರು ಆಗಮಿಸುತ್ತಿದ್ದು, ವಿಐಪಿ ಮತ್ತು ವಿವಿಐಪಿ ಸಂಬಂಧಿತ ಭಕ್ತರ ಅನಾನುಕೂಲತೆಯನ್ನು ತಪ್ಪಿಸಲು ದೇವಾಲಯಕ್ಕೆ ಭೇಟಿ ನೀಡುವುದನ್ನು ವಿಳಂಬಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಸಚಿವರನ್ನು ಒತ್ತಾಯಿಸಿದ್ದಾರೆ.
ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯ ನೇತೃತ್ವದ ವೇಳೆ ಪ್ರಧಾನಿ ಮೋದಿ, ದೇವಸ್ಥಾನದಲ್ಲಿ ಭಕ್ತರ ಭಾರೀ ನೂಕುನುಗ್ಗಲು ಮತ್ತು ದೇವಾಲಯದ ಪಟ್ಟಣಕ್ಕೆ ವಿವಿಐಪಿ ಮತ್ತು ವಿಐಪಿ ಭೇಟಿಗಳಿಂದ ಸಾರ್ವಜನಿಕರಿಗೆ ಉಂಟಾಗುವ ಅನಾನುಕೂಲತೆಗಳ ಬಗ್ಗೆ ಹಾಗೂ ಭದ್ರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಸರ್ಕಾರದ ಮೂಲಗಳು ಸುದ್ದಿ ಸಂಸ್ಥೆ ಎಎನ್ಐಗೆ ತಿಳಿಸಿವೆ.
ಎಲ್ಲರಿಗೂ ಸುಗಮ ಮತ್ತು ಹೆಚ್ಚು ಸಂಘಟಿತ ಅನುಭವಕ್ಕಾಗಿ ತಮ್ಮ ಅಯೋಧ್ಯೆ ಭೇಟಿಯನ್ನು ಮಾರ್ಚ್ ವರೆಗೆ ಮುಂದೂಡಲು ಕೇಂದ್ರ ಮಂತ್ರಿಗಳಿಗೆ ಸಲಹೆ ನೀಡಿದ್ದಾರೆ.
ಜನವರಿ 22 ರಂದು ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾ ಸಮಾರಂಭದ ನಂತರ ಹೆಚ್ಚಿನ ಸಂಖ್ಯೆಯ ಭಕ್ತರು ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ದೇವಸ್ಥಾನಕ್ಕೆ ಭೇಟಿ ನೀಡುವುದನ್ನು ಮುಂದುವರೆಸಿದ್ದಾರೆ. ಬುಧವಾರ ಕೂಡಾ ದೇವಳ ಪರಿಸರದಲ್ಲಿ ಜನಜಂಗುಳಿ ಕಂಡು ಬಂದಿದೆ.
ಅಯೋಧ್ಯೆಯಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ರಾಮ ಮಂದಿರಕ್ಕೆ ಭೇಟಿ ನೀಡುವುದರಿಂದ ಪಟ್ಟಣದಲ್ಲಿ ಭದ್ರತಾ ಕ್ರಮಗಳನ್ನು ಹೆಚ್ಚಿಸಲಾಗಿದೆ. ಮಂಗಳವಾರ ಒಟ್ಟು 5 ಲಕ್ಷ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎಂದು ವರದಿಯಾಗಿದೆ.