ಅಬುಧಾಬಿಯಲ್ಲಿ ಹಿಂದೂ ದೇವಾಲಯದ ಉದ್ಘಾಟನೆಯ ಆಹ್ವಾನಕ್ಕೆ ಪ್ರಧಾನಿ ಮೋದಿ ಅಸ್ತು

ನವದೆಹಲಿ: ಫೆಬ್ರವರಿಯಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ರಾಜಧಾನಿ ಅಬುಧಾಬಿಯಲ್ಲಿ ಹಿಂದೂ ದೇವಾಲಯವನ್ನು ಉದ್ಘಾಟಿಸುವ ಆಹ್ವಾನವನ್ನು ಪ್ರಧಾನಿ ನರೇಂದ್ರ ಮೋದಿ ಸ್ವೀಕರಿಸಿದ್ದಾರೆ ಎಂದು ಬಿಎಪಿಎಸ್ ಸ್ವಾಮಿನಾರಾಯಣ ಸಂಸ್ಥೆ ತಿಳಿಸಿದೆ.

ಸ್ವಾಮಿ ಈಶ್ವರಚರಣದಾಸ್ ಮತ್ತು ಸ್ವಾಮಿ ಬ್ರಹ್ಮವಿಹಾರಿದಾಸ್ ನೇತೃತ್ವದ ಬಿಎಪಿಎಸ್ ಸಂಘಟನೆಯ ಪ್ರತಿನಿಧಿಗಳು ನವದೆಹಲಿಯ ನಿವಾಸದಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಫೆಬ್ರವರಿ 14 ರಂದು ಮಂದಿರದ ಉದ್ಘಾಟನೆಗೆ ಆಹ್ವಾನವನ್ನು ನೀಡಿದರು ಎಂದು ಸ್ವಾಮಿನಾರಾಯಣ ಸಂಸ್ಥೆಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಅರಬ್ ದೇಶದಲ್ಲಿ ದೇವಾಲಯವನ್ನು ಉದ್ಘಾಟಿಸುವ ಆಹ್ವಾನವನ್ನು ಪಿಎಂ ಮೋದಿ ಪ್ರೀತಿಯಿಂದ ಸ್ವೀಕರಿಸಿದ್ದಾರೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಸುಮಾರು ಒಂದು ಗಂಟೆ ಅವಧಿಯ ಸಭೆಯಲ್ಲಿ, ಬಿಎಪಿಎಸ್ ನಿಯೋಗವು ಜಾಗತಿಕ ಸಾಮರಸ್ಯಕ್ಕಾಗಿ ಅಬುಧಾಬಿ ದೇವಾಲಯದ ಮಹತ್ವ ಮತ್ತು ಜಾಗತಿಕ ವೇದಿಕೆಯಲ್ಲಿ ಭಾರತದ ಆಧ್ಯಾತ್ಮಿಕ ನಾಯಕತ್ವಕ್ಕಾಗಿ ಮೋದಿಯವರ ದೃಷ್ಟಿಕೋನವನ್ನು ಚರ್ಚಿಸಿತು ಎಂದು ಸಂಸ್ಥೆ ತಿಳಿಸಿದೆ.