ಅಖಿಲ ಭಾರತ ಮೀನುಗಾರರ ವೇದಿಕೆಯ ನಿಯೋಗದಿಂದ ಪ್ರಧಾನಿ ಭೇಟಿ

ಉಡುಪಿ: ಅಖಿಲ ಭಾರತ ಮೀನುಗಾರ ವೇದಿಕೆಯ ನೇತೃತ್ವದ ನಿಯೋಗ ಮಂಗಳವಾರ ತಡರಾತ್ರಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಬೋಟ್ ಹಾಗೂ 7 ಮಂದಿ ಮೀನುಗಾರರನ್ನು  ಶೀಘ್ರವಾಗಿ ಪತ್ತೆ ಹಚ್ಚಲು ವಿಶೇಷ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದರು.
ಹಾಗೆಯೇ ಈ ವೇಳೆ ಮೀನುಗಾರಿಕೆಗೆ ಸಂಬಂಧಿಸಿದ ವಿವಿಧ ಬೇಡಿಕೆಗಳಾದ ಮೀನುಗಾರಿಕೆ ಬಳಸುವ ಡೀಸೆಲ್ ಮೇಲಿನ ರೋಡ್ ಸೆಸ್  ವಿನಾಯಿತಿ, ಮೀನುಗಾರಿಕೆಗೆ ಸಂಬಂಧಪಟ್ಟ ಚಟುವಟಿಕೆಗಳಿಗೆ ಜಿಎಸ್ಟಿ ವಿನಾಯಿತಿ, ಮೀನುಗಾರಿಕೆಗೆ ಕೇಂದ್ರ ಸರ್ಕಾರದ ಪ್ರತ್ಯೇಕ ಸಚಿವಾಲಯ,  60 ವರ್ಷ ಮೇಲ್ಪಟ್ಟ ಮೀನುಗಾರರಿಗೆ ಪಿಂಚಣಿ ಸೌಲಭ್ಯ, ಮೀನುಗಾರಿಕೆಗೆ ಬಳಸುವ ಸೀಮೆ ಎಣ್ಣೆ ಪ್ರಮಾಣದಲ್ಲಿ ಹೆಚ್ಚಳ, ಪ್ರತ್ಯೇಕ ಮೀನುಗಾರಿಕ ಕೈಗಾರಿಕಾ ವಲಯ ಹಾಗೂ ಮೀನುಗಾರಿಕೆಯ ಅಭಿವೃದ್ಧಿಗೆ ಸಮಗ್ರ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ವಿನಂತಿಸಲಾಯಿತು.
ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಪ್ರಧಾನಿ ಮೀನುಗಾರರ ಪತ್ತೆಗೆ ಸಕಲ ರೀತಿಯಲ್ಲಿ ಸಹಕರಿಸಿ ಮೀನುಗಾರರು ಸುರಕ್ಷಿತವಾಗಿ ಮರಳಿ ಬರಲು ಸರ್ವ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನಿಯೋಗದ ನೇತೃತ್ವ ವಹಿಸಿದ ಅಖಿಲ ಭಾರತ ಮೀನುಗಾರ ವೇದಿಕೆಯ ಅಧ್ಯಕ್ಷ ವೆಲ್ಜಿ ಭಾಯಿ ಮಸಾನಿ,  ಗುಜರಾತ್ ಸಂಸದ ರಾಜೇಶ್ ಭಾಯಿ ಚುಡಸಮ, ದ.ಕ ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶ್ ಪಾಲ್ ಸುವರ್ಣ, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್, ದಯಾನಂದ ಸುವರ್ಣ, ಕರುಣಾಕರ ಸಾಲ್ಯಾನ್, ಕಿಶೋರ್ ಸುವರ್ಣ, ಅನಿಲ್, ನಿತಿನ್ ಕುಮಾರ್, ಮನೋಹರ್ ಬೋಳೂರು ಮೊದಲಾದವರು ಉಪಸ್ಥಿತರಿದ್ದರು.