ಚಾರ ನವೋದಯ ವಿದ್ಯಾಲಯದಲ್ಲಿ ಅಳಿವಿನಂಚಿನಲ್ಲಿರುವ ಶ್ರೀತಾಳೆ ಗಿಡ ನಾಟಿ

ಹೆಬ್ರಿ: ಸಾಲುಮರದ ತಿಮ್ಮಕ್ಕ ಉಡುಪಿಗೆ ಆಗಮಿಸಿದ ಸಂದರ್ಭದಲ್ಲಿ ಅವರಿಗೆ ನೀಡಿದ ಅಳಿವಿನಂಚಿನಲ್ಲಿರುವ ಶ್ರೀತಾಳೆ ಗಿಡಗಳನ್ನು ಸುತ್ತಮುತ್ತಲಿನ ಪರಿಸರದಲ್ಲಿ ಬೆಳೆಸುವಂತೆ ಕರೆ ನೀಡಿದ್ದರು. ಈ ನಿಟ್ಟಿನಲ್ಲಿ
ಅಳಿವಿನಂಚಿನಲ್ಲಿರುವ ಹಾಗೂ ವಿಶೇಷ ಮಹತ್ವವಿರುವ ಶ್ರೀತಾಳೆ ಗಿಡಗಳನ್ನು ಎಲ್ಲರೂ ಬೆಳೆಸಿ ಉಳಿಸಿ ಎಂದು ಉಡುಪಿಯ ‘ನಮ್ಮ ಮನೆ ನಮ್ಮ ಮರ’ ತಂಡದ ರೂವಾರಿ ಅವಿನಾಶ್ ಕಾಮತ್ ಹೇಳಿದರು.

ಅವರು ಜು. 28 ರಂದು ಹೆಬ್ರಿ ಚಾರ ಜವಾಹರ ನವೋದಯ ವಿದ್ಯಾಲಯ ಹಾಗೂ ರಕ್ಷಕ-ಶಿಕ್ಷಕ ಸಮಿತಿಯ ನೇತೃತ್ವದಲ್ಲಿ ಉಡುಪಿಯ ನಮ್ಮ ಮನೆ ನಮ್ಮ ಮರ ತಂಡದ ಸಹಯೋಗದೊಂದಿಗೆ ವಿದ್ಯಾಲಯದ ಪರಿಸರದಲ್ಲಿ ವಿನಾಶದ ಅಂಚಿನಲ್ಲಿರುವ ‘ಶ್ರೀತಾಳೆ’ ಗಿಡ ನೆಡುವ ಕಾಯ೯ಕ್ರಮದಲ್ಲಿ ಮಾತನಾಡಿದರು.

ಚಾರ ನವೋದಯ ವಿದ್ಯಾಲಯದ ಪ್ರಾಂಶುಪಾಲೆ ವಿಜಯಕುಮಾರಿ ಗಿಡ ನಾಟಿ ಕಾಯ೯ಕ್ರಮ ಚಾಲನೆ ನೀಡಿ ಮಾತನಾಡಿ ಪರಿಸರ ದಿನಾಚರಣೆ ಕೇವಲ ಆಚರಣೆಗೆ ಸೀಮಿತವಾಗಿರದೆ ಇಂತಹ ಅಮೂಲ್ಯವಾದ ಗಿಡಗಳನ್ನು ನೆಟ್ಟು ಬೆಳೆಸುವ ಜವಾಬ್ದಾರಿ ನಮ್ಮಲ್ಲೆರ ಮೇಲಿದೆ ಎಂದರು.

ಈ ಸಂದರ್ಭದಲ್ಲಿ ನವೋದಯ ವಿದ್ಯಾಲಯದ ಪಿಟಿಸಿ ಅಧ್ಯಕ್ಷ ಉದಯಕುಮಾರ್ ಶೆಟ್ಟಿ , ವಿದ್ಯಾಲಯದ ಉಪನ್ಯಾಸಕ ಶ್ರೀಕಾಂತ ಬಿ.ಎಸ್ ,ಸಂಗೀತ ಶಿಕ್ಷಕ ಮಹಾದೇವ ,ಸಿಬ್ಬಂದಿ ನಾಗೇಶ ಮೊದಲಾದವರು ಉಪಸ್ಥಿತರಿದ್ದರು.