ವಿಮಾನ ಹೈಜಾಕ್, ಬೆದರಿಕೆ ಸಂದೇಶ: ಕೋಲ್ಕತ್ತಾ-ಮುಂಬೈ ಏರ್ ಇಂಡಿಯಾ ವಿಮಾನ ಹಾರಾಟ ರದ್ದು

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಂಬೈಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನಕ್ಕೆ ಹೈಜಾಕ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಹಾರಾಟವನ್ನು ರದ್ದುಗೊಳಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ವಿಮಾನವನ್ನು ಪ್ರತ್ಯೇಕ ಸ್ಥಳಕ್ಕೆ ಸ್ಥಳಾಂತರಿಸಿ ಭದ್ರತಾ ತಪಾಸಣೆ ನಡೆಸಲಾಗಿದೆ.

ವಿಮಾನ ನಿಲ್ದಾಣದ ಮೂಲಗಳ ಪ್ರಕಾರ, ಏರ್ ಇಂಡಿಯಾದ ಎಐ 772 ವಿಮಾನವು ಇಂದು ಬೆಳಗ್ಗೆ 10.10ಕ್ಕೆ ಕೋಲ್ಕತ್ತಾದಿಂದ ಮುಂಬೈಗೆ ಪ್ರಯಾಣ ಬೆಳೆಸಬೇಕಿತ್ತು. ಏರ್‌ಬಸ್ ಎ320 ನಿಯೋ ಮಾದರಿಯ ವಿಮಾನ ಟೇಕ್‌ಆಫ್‌ಗೆ ಸಿದ್ಧವಾಗಿದ್ದ ಸಂದರ್ಭದಲ್ಲಿ ಹೈಜಾಕ್ ಬೆದರಿಕೆ ಸಂದೇಶ ಪತ್ತೆಯಾಗಿದೆ.

ವಿಮಾನದ ಶೌಚಾಲಯದಲ್ಲಿ ಲಿಪ್‌ಸ್ಟಿಕ್ ಸಂದೇಶ ಪತ್ತೆ

ವಿಮಾನದ ಶೌಚಾಲಯದಲ್ಲಿ ಲಿಪ್‌ಸ್ಟಿಕ್‌ನಿಂದ ಬರೆಯಲಾಗಿದ್ದ ಹೈಜಾಕ್ ಬೆದರಿಕೆ ಸಂದೇಶವನ್ನು ಕ್ಯಾಬಿನ್ ಸಿಬ್ಬಂದಿ ಪತ್ತೆಹಚ್ಚಿದ್ದಾರೆ. ತಕ್ಷಣವೇ ಈ ಬಗ್ಗೆ ಪೈಲಟ್‌ಗೆ ಮಾಹಿತಿ ನೀಡಿದ್ದಾರೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಪೈಲಟ್, ವಾಯು ಸಂಚಾರ ನಿಯಂತ್ರಣ ವಿಭಾಗಕ್ಕೆ ಮಾಹಿತಿ ನೀಡಿ ತುರ್ತು ಹೈಜಾಕ್ ಎಚ್ಚರಿಕೆ ನೀಡಿದ್ದಾರೆ. ಬಳಿಕ ವಿಮಾನವನ್ನು ರನ್‌ವೇಯಿಂದ ಪ್ರತ್ಯೇಕ ಸ್ಥಳಕ್ಕೆ ಕೊಂಡೊಯ್ಯಲಾಗಿದೆ.

ಪ್ರಯಾಣಿಕರು, ಲಗೇಜ್‌ಗಳ ತೀವ್ರ ತಪಾಸಣೆ

ಬೆದರಿಕೆ ಸಂದೇಶ ಪತ್ತೆಯಾದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ವಿಮಾನ ಭದ್ರತಾ ಅಧಿಕಾರಿಗಳು, ಸಿಐಎಸ್‌ಎಫ್ ಸಿಬ್ಬಂದಿ ಸೇರಿದಂತೆ ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ಆರಂಭಿಸಿವೆ.

ವಿಮಾನದಲ್ಲಿದ್ದ ಪ್ರಯಾಣಿಕರು ಹಾಗೂ ಅವರ ಲಗೇಜ್‌ಗಳನ್ನು ತೀವ್ರ ಭದ್ರತಾ ತಪಾಸಣೆಗೆ ಒಳಪಡಿಸಲಾಗಿದೆ. ಅಲ್ಲದೆ, ವಿಮಾನದ ಒಳಭಾಗವನ್ನೂ ಅಧಿಕಾರಿಗಳು ಕೂಲಂಕಷವಾಗಿ ಪರಿಶೀಲಿಸಿದ್ದಾರೆ. ಯಾವುದೇ ಅನುಮಾನಾಸ್ಪದ ವಸ್ತುಗಳಿವೆಯೇ ಎಂಬುದರ ಬಗ್ಗೆ ಶೋಧ ಕಾರ್ಯ ಮುಂದುವರಿದಿದೆ.

ಎಲ್ಲ ಭದ್ರತಾ ತಪಾಸಣೆಗಳು ಪೂರ್ಣಗೊಂಡು ಅಗತ್ಯ ಅನುಮತಿ ದೊರೆಯುವವರೆಗೂ ವಿಮಾನ ಹಾರಾಟಕ್ಕೆ ಅವಕಾಶ ನೀಡುವುದಿಲ್ಲ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.

ವಿಮಾನವನ್ನು ರನ್‌ವೇಯಿಂದ ಏಕಾಏಕಿ ಪ್ರತ್ಯೇಕ ಸ್ಥಳಕ್ಕೆ ಸ್ಥಳಾಂತರಿಸಿ ಭದ್ರತಾ ಪಡೆಗಳನ್ನು ನಿಯೋಜಿಸಿರುವುದು ಪ್ರಯಾಣಿಕರಲ್ಲಿ ಆತಂಕ ಮೂಡಿಸಿತ್ತು. ಈ ಬೆದರಿಕೆ ಸಂದೇಶದ ಹಿಂದೆ ಯಾವುದಾದರೂ ಉದ್ದೇಶಪೂರ್ವಕ ಪಿತೂರಿ ಇದೆಯೇ ಎಂಬುದನ್ನು ಪತ್ತೆಹಚ್ಚಲು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಸದ್ಯ ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಬೆದರಿಕೆ ಸಂದೇಶದ ನೈಜತೆ ಮತ್ತು ಅದರ ಮೂಲದ ಕುರಿತು ತನಿಖೆ ಮುಂದುವರಿದಿದೆ. ತನಿಖೆ ಪೂರ್ಣಗೊಳ್ಳುವವರೆಗೆ ಬೆದರಿಕೆಯ ವಿಶ್ವಾಸಾರ್ಹತೆಯ ಬಗ್ಗೆ ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂದು ಮೂಲಗಳು ತಿಳಿಸಿವೆ.