ಓಮನ್ : ದೋಹಾದಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನದ ಪೈಲಟ್ ಹಾರಾಟದ ಮಧ್ಯೆಯೇ ದಿಢೀರ್ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ವಿಮಾನವನ್ನು ಮಸ್ಕತ್ಗೆ ತಿರುಗಿಸಿ ಸುರಕ್ಷಿತವಾಗಿ ತುರ್ತು ಭೂಸ್ಪರ್ಶ ಮಾಡಲಾಗಿದೆ.
ಇಂಡಿಗೋದ 6E 1302 ವಿಮಾನ ದೋಹಾದಿಂದ ಬೆಂಗಳೂರಿಗೆ ಹಾರಾಟ ನಡೆಸುತ್ತಿತ್ತು. ಟೇಕ್ಆಫ್ ಆದ ಕೆಲವೇ ಸಮಯದ ಬಳಿಕ ಪೈಲಟ್-ಇನ್-ಕಮಾಂಡ್ ಅಸ್ವಸ್ಥರಾಗಿದ್ದು, ಅವರಿಗೆ ತಕ್ಷಣ ವೈದ್ಯಕೀಯ ನೆರವಿನ ಅಗತ್ಯವಿತ್ತು ಎನ್ನಲಾಗಿದೆ.
ಮಸ್ಕತ್ನಲ್ಲಿ ತುರ್ತು ಲ್ಯಾಂಡಿಂಗ್
ಪೈಲಟ್ ಅಸ್ವಸ್ಥಗೊಂಡಿರುವುದು ತಿಳಿಯುತ್ತಿದ್ದಂತೆ ವಿಮಾನವನ್ನು ಮಸ್ಕತ್ಗೆ ತಿರುಗಿಸಲಾಗಿದೆ. ಬಳಿಕ ವಿಮಾನವನ್ನು ಮಸ್ಕತ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಗಿದ್ದು, ಪೈಲಟ್ಗೆ ತಕ್ಷಣ ವೈದ್ಯಕೀಯ ನೆರವು ಒದಗಿಸಲಾಗಿದೆ.
ವಿಮಾನ ನಿಲ್ದಾಣದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಪೈಲಟ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಪ್ರಯಾಣಿಕರಿಗೆ ಪರ್ಯಾಯ ವಿಮಾನ
ಪೈಲಟ್ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಬೆಂಗಳೂರಿನ ಪ್ರಯಾಣಿಕರ ಪ್ರಯಾಣಕ್ಕೆ ಯಾವುದೇ ತೊಂದರೆಯಾಗದಂತೆ ಇಂಡಿಗೋ ಪರ್ಯಾಯ ವಿಮಾನ ಹಾಗೂ ಹೊಸ ಸಿಬ್ಬಂದಿಯ ವ್ಯವಸ್ಥೆ ಮಾಡಿದೆ. ಪ್ರಯಾಣಿಕರಿಗೆ ಉಪಹಾರ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಪ್ರಯಾಣಿಕರಿಗೆ ಇಂಡಿಗೋ ಕ್ಷಮೆಯಾಚನೆ
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಇಂಡಿಗೋ, ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸಿದೆ. ಗ್ರಾಹಕರು, ಸಿಬ್ಬಂದಿ ಹಾಗೂ ವಿಮಾನಗಳ ಸುರಕ್ಷತೆ ಸಂಸ್ಥೆಯ ಪ್ರಮುಖ ಆದ್ಯತೆಯಾಗಿದೆ ಎಂದು ಸ್ಪಷ್ಟಪಡಿಸಿದೆ.















