ಪಿಎಫ್‌ಐ ಮತ್ತು ಸಂಬಂಧಿತ 8 ಸಂಘಟನೆಗಳು 5 ವರ್ಷಗಳ ಕಾಲ ನಿಷೇಧ: ಕೇಂದ್ರ ಗೃಹ ಸಚಿವಾಲಯದ ಮಹತ್ವದ ನಿರ್ಧಾರ

ನವದೆಹಲಿ: ದೇಶಾದ್ಯಂತ ಅನೇಕ ದಾಳಿಗಳು ಮತ್ತು ಬಂಧನಗಳ ನಂತರ, ಭಯೋತ್ಪಾದಕ ನಿಧಿಗೆ ಸಂಬಂಧಿಸಿದ ಆಪಾದಿತ ಸಂಬಂಧಕ್ಕಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಅನ್ನು ಗೃಹ ಸಚಿವಾಲಯ ಬುಧವಾರ ಐದು ವರ್ಷಗಳ ಕಾಲ ನಿಷೇಧಿಸಿದೆ. ಇದರ ಜೊತೆಗೆ, ಪಿಎಫ್‌ಐಯ ಸಹವರ್ತಿ ಸಂಸ್ಥೆಗಳಾದ ರಿಹ್ಯಾಬ್ ಇಂಡಿಯಾ ಫೌಂಡೇಶನ್, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್, ನ್ಯಾಷನಲ್ ಕಾನ್ಫೆಡರೇಶನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಸೇಶನ್, ನ್ಯಾಷನಲ್ ವುಮೆನ್ಸ್ ಫ್ರಂಟ್, ಜೂನಿಯರ್ ಫ್ರಂಟ್, ಎಂಪವರ್ ಇಂಡಿಯಾ ಫೌಂಡೇಶನ್ ಮತ್ತು ರಿಹ್ಯಾಬ್ ಫೌಂಡೇಶನ್ ಗಳನ್ನು ನಿಷೇಧಿಸಲಾಗಿದೆ.

ಈ ಎಲ್ಲಾ ಸಂಘಟನೆಗಳನ್ನು ನಿಷೇಧಿಸುವಂತೆ ಹಲವು ರಾಜ್ಯಗಳು ಒತ್ತಾಯಿಸಿದ್ದವು. ತನಿಖಾ ಸಂಸ್ಥೆಗಳ ವರದಿ ಆಧರಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸೆಪ್ಟೆಂಬರ್ 22 ಮತ್ತು ಸೆಪ್ಟೆಂಬರ್ 27 ರಂದು ರಾಷ್ಟ್ರೀಯ ತನಿಖಾ ಸಂಸ್ಥೆ, ಜಾರಿ ನಿರ್ದೇಶನಾಲಯ ಮತ್ತು ರಾಜ್ಯ ಪೊಲೀಸರು ಪಿಎಫ್‌ಐ ಮೇಲೆ ದಾಳಿ ನಡೆಸಿದ್ದರು. ಮೊದಲ ಸುತ್ತಿನ ದಾಳಿಯಲ್ಲಿ ಪಿಎಫ್‌ಐಗೆ ಸೇರಿದ 106 ಮಂದಿಯನ್ನು ಬಂಧಿಸಲಾಗಿತ್ತು. ಏತನ್ಮಧ್ಯೆ, ಎರಡನೇ ಸುತ್ತಿನ ದಾಳಿಯಲ್ಲಿ, ಪಿಎಫ್‌ಐ ಗೆ ಸೇರಿದ 247 ಜನರನ್ನು ಬಂಧಿಸಲಾಗಿದೆ. ತನಿಖಾ ಸಂಸ್ಥೆಗಳು ಈ ಸಂಘಟನೆಗಳ ವಿರುದ್ಧ ಸಾಕಷ್ಟು ಪುರಾವೆಗಳನ್ನು ಪಡೆದಿದ್ದು, ಅದರ ಆಧಾರದ ಮೇಲೆ ಸಂಘಟನೆಗಳನ್ನು ನಿಷೇಧಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಬೆಂಬಲಿಸುತ್ತಿದ್ದಾರೆ ಎಂಬ ಆರೋಪದ ಮೇಲೆ ಎನ್ಐಎ, ಇತರ ತನಿಖಾ ಸಂಸ್ಥೆಗಳೊಂದಿಗೆ, ‘ಆಪರೇಷನ್ ಆಕ್ಟೋಪಸ್’ ಅಡಿಯಲ್ಲಿ ಪಿಎಫ್ಐ ಸದಸ್ಯರ ಮೇಲೆ ದಾಳಿ ನಡೆಸಿದೆ. ಕೇಂದ್ರ ಸರ್ಕಾರವು ಪಿಎಫ್ಐ ಮತ್ತು ಅದರ ಸಹವರ್ತಿ ಸಂಘಟನೆಗಳು ಕಾನೂನುಬಾಹಿರ ಸಂಘ ಎಂದು ಘೋಷಿಸಿದೆ ಮತ್ತು ತಕ್ಷಣವೇ ಜಾರಿಗೆ ಬರುವಂತೆ ನಿಷೇಧ ಹೇರಿದೆ.