ಪೆಟ್ರೋಲ್, ಡೀಸೆಲ್ ದರ ಮತ್ತೆ ಹೆಚ್ಚಳ : 10 ದಿನಗಳಲ್ಲಿ ಮೂರನೇ ಬಾರಿ ಬೆಲೆ ಏರಿಕೆ!

ದೇಶಾದ್ಯಂತ ಪೆಟ್ರೋಲ್ ಹಾಗೂ ಡೀಸೆಲ್ ದರಗಳಲ್ಲಿ ಮತ್ತೆ ಏರಿಕೆ ಮಾಡಲಾಗಿದೆ. ಜಾಗತಿಕ ಕಚ್ಚಾ ತೈಲ ದರ ಏರಿಕೆ ಹಾಗೂ ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನ ಪರಿಸ್ಥಿತಿಗಳ ಹಿನ್ನೆಲೆ ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳು ಇಂಧನ ದರಗಳನ್ನು ಮತ್ತೊಮ್ಮೆ ಹೆಚ್ಚಿಸಿವೆ, ಸರಕಾರ ಘೋಷಿಸಿದೆ. ಕೇಂದ್ರ ಸರಕಾರದ ಈ ನಡೆಯ ಕುರಿತು ಆಕ್ರೋಶವೂ ವ್ಯಕ್ತವಾಗಿದೆ.

ಹೊಸ ದರಗಳ ಪ್ರಕಾರ, ಪೆಟ್ರೋಲ್ ಪ್ರತಿ ಲೀಟರ್‌ಗೆ 87 ಪೈಸೆ ಹಾಗೂ ಡೀಸೆಲ್ ಪ್ರತಿ ಲೀಟರ್‌ಗೆ 91 ಪೈಸೆ ಏರಿಕೆಯಾಗಿದೆ. ರಾಷ್ಟ್ರ ರಾಜಧಾನಿ New Delhiಯಲ್ಲಿ ಪೆಟ್ರೋಲ್ ದರ 98.64 ರೂಪಾಯಿಯಿಂದ 99.51 ರೂಪಾಯಿಗೆ ಏರಿಕೆಯಾದರೆ, ಡೀಸೆಲ್ ದರ 91.58 ರೂಪಾಯಿಯಿಂದ 92.49 ರೂಪಾಯಿಗೆ ಹೆಚ್ಚಳವಾಗಿದೆ.

ಈ ತಿಂಗಳಲ್ಲಿ ಇದು ಮೂರನೇ ಬಾರಿ ಇಂಧನ ದರ ಏರಿಕೆಯಾಗಿದೆ. ಮೇ 15ರಂದು ಮೊದಲ ಬಾರಿಗೆ ಪೆಟ್ರೋಲ್ ದರ ಲೀಟರ್‌ಗೆ 3 ರೂಪಾಯಿ ಹೆಚ್ಚಳವಾಗಿತ್ತು. ಬಳಿಕ ಮೇ 19ರಂದು 90 ಪೈಸೆ ಏರಿಕೆ ಮಾಡಲಾಗಿತ್ತು. ಇದೀಗ ಮತ್ತೆ ಬೆಲೆ ಏರಿಕೆಯಿಂದ ವಾಹನ ಸವಾರರಿಗೆ ಹೆಚ್ಚುವರಿ ಹೊರೆ ಎದುರಾಗಿದೆ.