ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಂಶಯಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಸುದ್ದಿ ವಾಹಿನಿಗಳು ತನಿಖೆ ನಡೆಸುವುದನ್ನು ನಿಲ್ಲಿಸಬೇಕೆಂದು ಮುಂಬೈ ಹೈಕೋರ್ಟ್ ನಲ್ಲಿ ಖಾಸಗಿ ದೂರು ದಾಖಲಾಗಿದೆ.
ನೀಲೇಶ್ ನಲ್ವಾಕಾ ಮತ್ತು ಇಬ್ಬರು ವ್ಯಕ್ತಿಗಳು ಬುಧವಾರ ಹೈಕೋರ್ಟ್ಗೆ ಈ ಅರ್ಜಿ ಸಲ್ಲಿಸಿದ್ದು, ಅರ್ಜಿ ವಿಚಾರಣೆ ನಡೆಯಬೇಕಿದೆ.
ಸುದ್ದಿವಾಹಿನಿಗಳು ಸುಶಾಂತ್ ಪ್ರಕರಣದ ಬಗ್ಗೆ ಸುದ್ದಿ ಪ್ರಸಾರ ಮತ್ತು ತನಿಖೆ ಬಗ್ಗೆ ಸುದ್ದಿ ಮಾಡುವುದಕ್ಕೆ ಮಿತಿ ಇರಬೇಕು. ಸುದ್ದಿವಾಹಿನಿಗಳ ಈ ರೀತಿಯ ವಿಚಾರಣೆಯು ಸಿಬಿಐ ತನಿಖೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಜೂನ್ 14ರಂದು ಸುಶಾಂತ್ ಸಾವಿಗೀಡಾದ ನಂತರ ಹಲವಾರು ಸುದ್ದಿವಾಹಿನಿಗಳು ಈ ಪ್ರಕರಣದ ವಿಚಾರಣೆ ಮತ್ತು ಅದೇ ರೀತಿಯ ಚಟುವಟಿಕೆಗಳನ್ನು ನಡೆಸುತ್ತಿವೆ ಎಂದು ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಟಿವಿ ಚಾನೆಲ್ ಮತ್ತು ಇತರ ಮಾಧ್ಯಮಗಳು ಈಗಾಗಲೇ ಆರೋಪಿಗೆ ಶಿಕ್ಷೆ ವಿಧಿಸುವ ಕಾರ್ಯಗಳನ್ನು ಮಾಡುತ್ತಿವೆ. ಈ ರೀತಿಯ ಸದೃಶ ತನಿಖೆಗಳು ಸುಪ್ರೀಂ ಕೋರ್ಟ್ ಆದೇಶ ಮತ್ತು ಕಾನೂನಿನ ವಿಧಿಯ ಉಲ್ಲಂಘನೆಯಾಗಿದೆ. ಇದು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಪ್ರಕರಣದ ತನಿಖೆ ಮೇಲೆ ಪರಿಣಾಮ ಬೀರುತ್ತದೆ ಎಂದು ಅರ್ಜಿದಾರರು ಹೇಳಿದ್ದಾರೆ.