ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ಮನೆ ಮನೆಗೆ ತೆರಳಿ ತ್ಯಾಜ್ಯ ಸಂಗ್ರಹಣೆ ಮಾಡುವ ಸ್ವಚ್ಛ ವಾಹಿನಿ ವಾಹನವನ್ನು ಖುದ್ದು ಪೆರುವಾಯಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ನಫೀಸಾ ಚಲಾಯಿಸಿ ಕರ್ತವ್ಯ ಪ್ರಜ್ಞೆಗೊಂದು ಉದಾಹರಣೆಯಾಗಿದ್ದಾರೆ.
ಗ್ರಾಮ ಪಂಚಾಯತ್ ನ ಉಪಾಧ್ಯಕ್ಷೆಯಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ತನ್ನ ಕರ್ತವ್ಯದ ಜೊತೆಗೆ ವಾಹನ ಚಾಲನೆಯ ಹೊಸ ಕೆಲಸವನ್ನು ಮೇ ಮೊದಲನೆ ವಾರದಿಂದ ಪ್ರಾರಂಭಿಸಿದ್ದಾರೆ ಎನ್ನಲಾಗಿದೆ.
ಖಾಸಗಿ ಮಾಧ್ಯಮವೊಂದರ ಜೊತೆ ಮಾತನಾಡಿದ ನಫೀಸಾ, ”ಮನೆಯಲ್ಲಿ ವಾಹನಗಳನ್ನು ಓಡಿಸುವ ನೈಪುಣ್ಯತೆ ಇರುವುದು ನನಗೆ ಸಹಾಯಕವಾಗಿ ಪರಿಣಮಿಸಿದೆ. ಗ್ರಾಮ ಪಂಚಾಯಿತಿ ಸದಸ್ಯೆ ಮತ್ತು ಉಪಾಧ್ಯಕ್ಷೆಯಾಗಿ ಸ್ವಚ್ಛ ವಾಹಿನಿ ಓಡಿಸುವ ಕೆಲಸ ಸಿಕ್ಕಿರುವುದು ಸಂತಸ ತಂದಿದೆ. ಡ್ರೈವಿಂಗ್‌ಗೆ ಆಯ್ಕೆಯಾದವನು ವಾಹನಗಳನ್ನು ಓಡಿಸಲು ಇನ್ನೂ ನೈಪುಣ್ಯತೆ ಹೊಂದಿಲ್ಲ. ಹೀಗಾಗಿ ಈ ಕೆಲಸವನ್ನು ಕೈಗೆತ್ತಿಕೊಳ್ಳುವಂತೆ ಸದಸ್ಯರು ಹಾಗೂ ಅಧಿಕಾರಿಗಳು ತಿಳಿಸಿದರು. ಇಡೀ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾರಕ್ಕೆ ಎರಡು ಬಾರಿ ಕಸ ಸಂಗ್ರಹಿಸುತ್ತೇವೆ. ಪ್ರತಿದಿನ ತ್ಯಾಜ್ಯ ಸಂಗ್ರಹಣೆಗಾಗಿ ನಿರ್ದಿಷ್ಟ ಪ್ರದೇಶಕ್ಕೆ ಭೇಟಿ ನೀಡಲು ನಾವು ಚಾರ್ಟ್ ಅನ್ನು ಸಿದ್ಧಪಡಿಸಿದ್ದೇವೆ”ಎಂದರು.
ಮೊದಲ ಬಾರಿಗೆ ಸದಸ್ಯೆಯಾಗಿರುವ ನಫೀಸಾ, ಮೊದಲ ಅವಧಿಯಲ್ಲಿಯೇ ಪೆರುವಾಯಿ ಗ್ರಾಮ ಪಂಚಾಯತಿಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದೆ ಗ್ರಾಮ ಪಂಚಾಯತಿಯಿಂದ ಆರಂಭಿಸಿದ ಸ್ವಚ್ಛತಾ ಆಂದೋಲನದಲ್ಲಿ ಭಾಗಿಯಾಗಿದ್ದು, ಹಿಂದಿನ ಅಧ್ಯಕ್ಷರು ಒಮ್ಮೊಮ್ಮೆ ಸ್ವಚ್ಛತಾ ಆಂದೋಲನಕ್ಕೆ ಆಕೆಯನ್ನು ಆಹ್ವಾನಿಸುತ್ತಿದ್ದರು ಮತ್ತು ಆಕೆ ಆಗಾಗ ಗ್ರಾಮ ಸಭೆಗೆ ಹಾಜರಾಗುತ್ತಿದ್ದುದರಿಂದ ಇದನ್ನು ಅರಿತುಕೊಳ್ಳಲು ಸಾಧ್ಯವಾಯಿತು ಎನ್ನುವ ನಫೀಸಾ ತನ್ನ ಈ ಕೆಲಸಕ್ಕೆ ಕುಟುಂಬದವರ ಸಂಪೂರ್ಣ ಬೆಂಬಲವಿದೆ ಎಂದು ಹೇಳಲು ಮರೆಯುವುದಿಲ್ಲ.
ಮೂಲ: ಡೆಕ್ಕನ್ ಹೆರಾಲ್ಡ್