ಅಂಬಲಪಾಡಿ ಜಂಕ್ಷನ್ ಬಳಿ ಸರಣಿ ಅಪಘಾತ: ಹಲವರಿಗೆ ಗಾಯ

ಉಡುಪಿ : ಇಲ್ಲಿನ ಅಂಬಲಪಾಡಿ ಜಂಕ್ಷನ್ ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಭಿನಂದನಾ ಪೆಟ್ರೋಲ್ ಬಂಕ್ ಎದುರು ಸರಣಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಯಾರಿಗೂ ಪ್ರಾಣಾಪಾಯವಾಗಿಲ್ಲ ಆದರೂ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಗುರುವಾರ ಸರಕು ತುಂಬಿದ ಲಾರಿ ಹಾಗೂ 3 ಪ್ರಯಾಣಿಕರ ಕಾರುಗಳ ನಡುವೆ ಈ ಅಪಘಾತ ಸಂಭವಿಸಿದ್ದು, ಕಾರುಗಳಲ್ಲಿದ್ದ ಈರ್ವರು ಮಹಿಳೆಯರು, ಓರ್ವ ಗಂಡಸು ಹಾಗೂ ಒಂದು ಮಗು ಗಾಯಗೊಂಡಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಸಾರ್ವಜನಿಕರ ಸಹಕಾರದೊಡನೆ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ಹಾಗೂ ಅಪಘಾತಕ್ಕೀಡಾದ ವಾಹನಗಳನ್ನು ಹೆದ್ದಾರಿಯಿಂದ ತೆರವುಗೊಳಿಸಲು ಸಹಕಾರ ನೀಡಿದರು.

ಅಪಘಾತ ತೀವ್ರತೆಗೆ ಎರಡು ಕಾರುಗಳು ಸಂಪೂರ್ಣ ನಜ್ಜುಗುಜ್ಜಾಗಿದೆ.