ಪೇಜಾವರ ಶ್ರೀಗಳ ಅಭಿನಂದನಾ ಸಮಾರಂಭಕ್ಕೆ ರಾಷ್ಟ್ರಪತಿ ಆಗಮನ

ಉಡುಪಿ: ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಪಾದರು ಸನ್ಯಾಸಾಶ್ರಮ ಸ್ವೀಕರಿಸಿ 80ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಶ್ರೀಗಳ ಶಿಷ್ಯರು ಹಾಗೂ ಅಭಿಮಾನಿಗಳು ಡಿ. 27 ರಂದು ಹಮ್ಮಿಕೊಂಡಿರುವ ರಾಷ್ಟ್ರೀಯ ನಾಗರಿಕ ಅಭಿನಂದನಾ ಸಮಾರಂಭವನ್ನು ಪೇಜಾವರ ಮಠದ ಎದುರಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ.

ಈ ಅಭಿವಂದನಾ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಭಾಗವಹಿಸುತ್ತಿರುವುದರಿಂದ ಕಾರ್ಯಕ್ರಮದ ಸ್ಥಳ ನಿಗದಿಯ ಕುರಿತು ಪೊಲೀಸ್ ಇಲಾಖೆ ಹಾಗೂ ಮಠದ ಸಿಬ್ಬಂದಿ ಹಲವು ಸಭೆಗಳನ್ನು ನಡೆಸಿದ್ದರು. ಈ ಹಿಂದೆ ಭದ್ರತೆ ಹಾಗೂ ಇತರ ಕಾರಣಗಳಿಂದ ಮಠದ ರಾಜಾಂಗಣದಲ್ಲಿ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿತ್ತು. ಆದರೆ, ರಾಷ್ಟ್ರಪತಿ ಭವನದ ಅಧಿಕಾರಿಗಳು ಮಠದ ಎದುರಲ್ಲಿಯೇ ಕಾರ್ಯಕ್ರಮ ಆಯೋಜಿಸಲು ಸೂಚಿಸಿದ ಹಿನ್ನೆಲೆಯಲ್ಲಿ ಅಲ್ಲಿಯೇ ನಡೆಸಲು ನಿರ್ಧರಿಸಲಾಗಿದೆ.

ಅಂದಿನ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಜೊತೆಗೆ ಕೇಂದ್ರ ಸಚಿವೆ ಉಮಾ ಭಾರತಿ, ಮುಖ್ಯಮಂತ್ರಿ ಕುಮಾರಸ್ವಾಮಿ, ಗವರ್ನರ್ ವಜುಭಾಯ್ ವಾಲಾ ಸೇರಿದಂತೆ ಹಲವರು ಗಣ್ಯರು ಭಾಗವಹಿಸುತ್ತಿದ್ದಾರೆ. ಹಾಗಾಗಿ ಪೊಲೀಸ್ ಇಲಾಖೆ ಶ್ರೀಕೃಷ್ಣ ಮಠದ ಸುತ್ತಮುತ್ತ, ಆದಿಉಡುಪಿಯ ಹೆಲಿಪ್ಯಾಡ್ ಹಾಗೂ ಉಡುಪಿ ನಗರದಾದ್ಯಂತ ಭದ್ರತೆಗೆ ಹೆಚ್ಚಿನ ಒತ್ತು ನೀಡಿದೆ. ಅಲ್ಲದೆ, ರಾಷ್ಟ್ರಪತಿಗಳು ಆದಿಉಡುಪಿ ಹೆಲಿಪ್ಯಾಡ್ ನಿಂದ ಶ್ರೀಕೃಷ್ಣಮಠಕ್ಕೆ ಬರುವ ಮಾರ್ಗ ಉದ್ದಕ್ಕೂ ಬೀಗಿ ಪೊಲೀಸ್ ಭದ್ರತೆ ನೀಡಲು ಸಿದ್ಧತೆ ಮಾಡಿಕೊಂಡಿದೆ.

ಕಾರ್ಯಕ್ರಮ ನಡೆಯುವ ದಿನ ಶ್ರೀಕೃಷ್ಣಮಠದ ಸುತ್ತಲಿನ ಅಂಗಡಿ ಮುಂಗಟ್ಟುಗಳು ತೆರೆಯುವಂತಿಲ್ಲ. ರಥಬೀದಿಯಲ್ಲಿ ಪೊಲೀಸ್ ಸರ್ಪಗಾವಲು ಇರಲಿದ್ದು, ಕಾರ್ಯಕ್ರಮ ಅಂತ್ಯವಾಗುವವರೆಗೂ ಶ್ರೀಕೃಷ್ಣ ಮಠಕ್ಕೆ ಭಕ್ತರ ಪ್ರವೇಶ ನಿಷೇಧಿಸಲಾಗಿದೆ.