ಪೇಜಾವರ ಶ್ರೀಗಳ ಕೃಷ್ಣೈಕ್ಯ: ಶಾಸಕ ಕಾಮತ್ ತೀವ್ರ ಸಂತಾಪ

ಉಡುಪಿ: ಶ್ರೀ ಕೃಷ್ಣನಗರಿ ಉಡುಪಿಯ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿಗಳು ಇಂದು ಮುಖ್ಯಪ್ರಾಣಐಕ್ಯ ಸೇರಿದ್ದು, ಇಡೀ ಕರುನಾಡು ಸ್ತಬ್ಧವಾಗಿದೆ. ಶ್ರೀಗಳ ಅಗಲಿಕೆಗೆ ಮಂಗಳೂರು ದಕ್ಷಿಣ ಶಾಸಕ ಡಿ ವೇದವ್ಯಾಸ್ ಕಾಮತ್ ಸಂತಾಪ ಸೂಚಿಸಿದ್ದಾರೆ.
ಜನರಿಗಾಗಿ ಅದರಲ್ಲಿಯೂ ಬಡವರಿಗಾಗಿ ಬದುಕಿದವರು ಶ್ರೀಗಳು. ಬಡತನ ನಿರ್ಮೂಲನೆ, ಅನ್ನ ದಾಸೋಹ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ತಮ್ಮ ಜೀವನವನ್ನು ಮೀಸಲಿಟ್ಟ ದಿವ್ಯ ಚೇತನ. ದೇಶದ ಸಂಸ್ಕೃತಿ ಪ್ರತೀಕರಾಗಿದ್ದರು. ಆಧ್ಯಾತ್ಮದ ಜೊತೆಗೆ ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಸಾರಿದವರು ಪೇಜಾವರ ಶ್ರೀಗಳು. ಸಮಾಜಕ್ಕೆ ಶ್ರೀಗಳು ನೀಡಿದ ಕೊಡುಗೆ ಅಪಾರ. ಈ ಹಿಂದೆ ನಾನು ಸಹ ಶ್ರೀಗಳನ್ನು ಭೇಟಿಯಾಗಿ ಅವರ ಆಶೀರ್ವಾದ ಪಡೆದು ಧನ್ಯನಾಗಿದ್ದೆ ಎಂದಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವುದು ಪೇಜಾವರ ಶ್ರೀಗಳ ಬಹುದೊಡ್ಡ ಕನಸಾಗಿತ್ತು. ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ನಿರ್ಮಾಣ ನಿಶ್ಚಿತ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಗಳು ಪ್ರತಿಯೊಂದು ಕಾರ್ಯಕ್ರಮದಲ್ಲೂ ಸಾರಿ ಸಾರಿ ಹೇಳುತ್ತಿದ್ದರು. ಆದರೆ ರಾಮನ ಭವ್ಯ ಮಂದಿರ ನಿರ್ಮಾಣವಾಗುವ ಮುನ್ನವೇ ಹಿರಿಯ ಸ್ವಾಮೀಜಿ ಹರಿಪಾದ ಸೇರಿದ್ದಾರೆ.
ರಾಮಮಂದಿರ ಹೋರಾಟದಲ್ಲಿ ಸ್ವಾಮೀಜಿಗಳ ಕೊಡುಗೆ ಅಪಾರ. ಈಗ ರಾಮಮಂದಿರ ಕಟ್ಟುವ ಸುಸಂದರ್ಭ ಬಂದಿದೆ. ಆದರೆ ಮಂದಿರ ನಿರ್ಮಾಣವಾಗುವವರೆ ಸ್ವಾಮೀಜಿಗಳು ಬದುಕಲೇ ಇಲ್ಲ.
ಈ ಹಿಂದೆ ಪ್ರಯಾಗ್ ರಾಜ್’ನಲ್ಲಿ ನಡೆದಿದ್ದ ಸಹಸ್ರಾರು ಸಂತರ ಧರ್ಮಸಭೆಯಲ್ಲಿ ಆರ್ಶಿರ್ವಚನ ನೀಡಿದ್ದ ಪೇಜಾವರ ಶ್ರೀವಿಶ್ವೇಶತೀರ್ಥ‌ ಶ್ರೀಪಾದರು, ಅಯೋದ್ಯೆಯಲ್ಲಿ ರಾಮಮಂದಿರ ನಿರ್ಮಾಣ, ದೇಶದಲ್ಲಿ ಗೋಹತ್ಯಾ ನಿಷೇಧ, ನಿರುದ್ಯೋಗ ನಿವಾರಣೆಗೆ ಕ್ರಮ, ಗಂಗಾ ಶುದ್ಧೀಕರಣ ಸೇರಿದಂತೆ ಭ್ರಷ್ಟಾಚಾರ ನಿರ್ಮೂಲನೆಗೆ ಮಹಾಭಾರತದ ಅರ್ಜುನರಂತೆ ಹೋರಾಟ ಮಾಡಬೇಕಾಗಿದೆ ಎಂದು ಕರೆ ನೀಡಿದ್ದರು.
ಮಾತ್ರವಲ್ಲ, ಹಿಂದೂ ಧರ್ಮಕ್ಕಾಗಿ ವಿಶ್ವಹಿಂದು ಪರಿಷತ್ತೆಂಬ ರಥದಲ್ಲಿ ಸಮಸ್ತ ಸಂತರು ಕೃಷ್ಣರಾಗಿ ಸಾರಥ್ಯವಹಿಸಿ, ಸಮಸ್ತ ಹಿಂದೂ ಸಮಾಜ ಅರ್ಜುನನಂತೆ ವೀರಾಗ್ರಣಿಗಳಾಗಿ ವಿಜಯ ಸಾಧಿಸುವ ತನಕ ಹೋರಾಟ ಮಾಡಲೇ ಬೇಕಾಗಿದೆ ಎಂದು ಹೇಳುವ ಮೂಲಕ ಸಮಸ್ತ ಹಿಂದೂಗಳ ಮನ ಗೆದ್ದಿದ್ದರು.
ಅದರಲ್ಲೂ ರಾಮಜನ್ಮ ಭೂಮಿ‌ ವಿವಾದ ಇತ್ಯರ್ಥಗೊಳಿಸಲು ಮತ್ತು ಅತೀ ಶೀಘ್ರ ಮಂದಿರ ನಿರ್ಮಾಣಕ್ಕಾಗಿ‌ ಶ್ರೀಪಾದರು ಪ್ರಧಾನಿ ಮೋದಿಯವರನ್ನು ಪದೇ ಪದೇ ಭೇಟಿಯಾಗಿ ಚರ್ಚಿಸುತ್ತಿದ್ದರು. ಅದರಂತೆ ದಶಕಗಳ ಕಾಲ ಕೋರ್ಟ್​ನಲ್ಲೇ ಉಳಿದಿದ್ದ ಅಯೋಧ್ಯೆ ಭೂವಿವಾದಕ್ಕೆ ಸುಪ್ರೀಂ ಕೋರ್ಟ್ ತಾರ್ಕಿಕ ಅಂತ ಕೊಟ್ಟಿತ್ತು. ಮಾತ್ರವಲ್ಲ, ವಿವಾಧಿತ ಭೂಮಿಯಲ್ಲಿ ರಾಮಮಂದಿರ ನಿರ್ಮಿಸಬಹುದು ಎಂದು ಹೇಳಿತ್ತು. ಇದರಿಂದ ಪೇಜಾವರ ಶ್ರೀವಿಶ್ವೇಶತೀರ್ಥ‌ ಶ್ರೀಪಾದರು ಬಹಳಷ್ಟು ಸಂತಸಗೊಂಡಿದ್ದರು. ಆದರೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುವ ಮೊದಲೇ ಶ್ರೀಪಾದರು ವಿಧಿವಶರಾಗಿದ್ದಾರೆ.
ಶ್ರೀಗಳು ನಮ್ಮನಗಲಿದೆ ಸುದ್ದಿ ಕೇಳಿ ಮನಸಿಗೆ ನೋವಾಗಿದೆ. ಎಲ್ಲ ಸಮುದಾಯ ಮತ್ತು ಲಕ್ಷಾಂತರ ಭಾರತೀಯರ ಆರಾಧ್ಯದೈವ. ಶ್ರೀಗಳು ನಮ್ಮನ್ನು ಅಗಲಿದ್ರೂ ಅವರ ತತ್ವ ಸಿದ್ಧಾಂತಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಶ್ರೀಗಳ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಎಲ್ಲಾ ಭಕ್ತರಿಗೆ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ ಎಂದು ಡಿ. ವೇದವ್ಯಾಸ್ ಕಾಮತ್  ಸಂತಾಪ ಸೂಚಿಸಿದ್ದಾರೆ.