ಪೇಜಾವರ ಶ್ರೀ ಕೃಷ್ಣೈಕ್ಯ: ಗಣ್ಯರ ಸಂತಾಪ

ಉಡುಪಿ: ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಪಾದರ ನಿಧನಕ್ಕೆ ರಾಜಕೀಯ, ಧಾರ್ಮಿಕ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಸಂತಾಪ ಸೂಚಿಸಿದ್ದಾರೆ. ಹಾಗೆಯೇ ಸಂಘ ಸಂಸ್ಥೆಗಳು ಸಹ ಭಾವಪೂರ್ವ ನುಡಿನಮನ ಸಲ್ಲಿಸಿವೆ.
ಪೇಜಾವರ ಶ್ರೀಗಳ ವಿಧಿವಶರಾಗಿರುವ ವಿಚಾರ ಅರಗಿಸಿಕೊಳ್ಳಲು ತೀರಾ ಕಷ್ಟವಾಗುತ್ತಿದೆ. ನನ್ನ ತಂದೆ ಮಧ್ವರಾಜ್‌ ಅವರ ಕಾಲದಿಂದಲೂ ಪೇಜಾವರ ಶ್ರೀ ನಮ್ಮ ಕುಟುಂಬಕ್ಕೆ ಮಾರ್ಗದರ್ಶಕರಾಗಿದ್ದರು. ಉಡುಪಿಯ ಅಭಿವೃದ್ಧಿಗೆ ನಾನು ಕಂಡ ಕನಸನ್ನು ನನಸು ಮಾಡಲು ಸದಾ ಸಲಹೆ ಸೂಚನೆ ನೀಡುತ್ತಿದ್ದರು. ನನಗೆ ಮಾರ್ಗದರ್ಶನ ಹಾಗೂ ಆಶೀರ್ವಾದ ಮಾಡುತ್ತಿದ್ದ ಶ್ರೀಗಳು ಕೃಷ್ಣೈಕ್ಯರಾಗಿರುವುದು ತುಂಬಾ ಬೇಸರ ಉಂಟುಮಾಡಿದೆ ಎಂದು ಎಂದು ಮಾಜಿ ಸಚಿವ ಪ್ರಮೋದ್‌ ಸಂತಾಪ ಸೂಚಿಸಿದ್ದಾರೆ.
ಜಿಲ್ಲಾ ಬಿಜೆಪಿಯಿಂದ ಸಂತಾಪ ಧಾರ್ಮಿಕ ಕ್ಷೇತ್ರದ ದಿಗ್ಗಜ ಹಾಗೂ ಹಿಂದೂ ಸಮಾಜದ ಸುಧಾರಕರಾಗಿದ್ದ ವಿಶ್ವೇಶತೀರ್ಥ
ಸ್ವಾಮೀಜಿ ಅವರ ಅಗಲಿಕೆ ಹಿಂದೂ ಸಮಾಜಕ್ಕೆ ತುಂಬಲಾರದ ನಷ್ಟ. ಸಮಾಜ ಒಬ್ಬ ವಿಶಿಷ್ಟ ವ್ಯಕ್ತಿತ್ವದ ಗುರುಗಳನ್ನು ಕಳೆದುಕೊಂಡಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಸಂತಾಪ ಸೂಚಿಸಿದ್ದಾರೆ.
ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ಕೆ. ರಘುಪತಿ ಭಟ್‌, ಹಾಲಾಡಿ ಶ್ರೀನಿವಾಸ ಶೆಟ್ಟಿ, ಲಾಲಾಜಿ ಆರ್‌. ಮೆಂಡನ್‌, ಸುನಿಲ್‌ ಕುಮಾರ್‌, ಬಿ.ಎಂ. ಸುಕುಮಾರ್‌ ಶೆಟ್ಟಿ, ಮುಖಂಡರಾದ ಕುಯಿಲಾಡಿ ಸುರೇಶ್‌ ನಾಯಕ್‌, ಯಶ್‌ಪಾಲ್‌ ಸುವರ್ಣ, ಕುತ್ಯಾರು ನವೀನ್‌ಶೆಟ್ಟಿ, ಸಂಧ್ಯಾ ರಮೇಶ್‌, ರವಿ ಅಮೀನ್‌ ಮೊದಲಾದವರು ಶ್ರೀಗಳ ಅಗಲಿಕೆಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
ಪರ್ಕಳ ಮಾರ್ಕೆಟ್‌ ಫ್ರೆಂಡ್ಸ್‌ ವತಿಯಿಂದ ಅಗಲಿದ ಪೇಜಾವರ ಶ್ರೀಗಳಿಗೆ ಶ್ರದ್ಧಾಂಜಲಿ ಹಾಗೂ ನುಡಿನಮನ ಸಲ್ಲಿಸಲಾಯಿತು.