ದಲಿತ ಕೇರಿಗೆ ಪೇಜಾವರ ಶ್ರೀ ಭೇಟಿ; ಗುರುಗಳ ಹಾದಿಯಲ್ಲಿ ಶಿಷ್ಯನ ಹೆಜ್ಜೆ

ಉಡುಪಿ: ಹಿಂದೂ ಸಮಾಜದಲ್ಲಿದ್ದ ಅಸ್ಪೃಶ್ಯತೆಯನ್ನು ನಿರ್ಮೂಲನೆಗೊಳಿಸಿ ಸದೃಢ ದೇಶದ ಕಟ್ಟುವ ಸಲುವಾಗಿ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ದೇಶಾದ್ಯಂತ ದಲಿತರ ಕಾಲೊನಿಗಳಿಗೆ ಭೇಟಿ ನೀಡಿ ಕ್ರಾಂತಿಯಾದ ಹೆಜ್ಜೆಯನ್ನಿಟ್ಟದ್ದರು. ಇದೀಗ ಅವರ ಶಿಷ್ಯ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಕೂಡ ಗುರುಗಳ ದಾರಿಯಲ್ಲಿ ಹೆಜ್ಜೆ ಹಾಕುವ ಮೂಲಕ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.

ಭಾನುವಾರ ಉಡುಪಿಯ ಕೊಡವೂರು ಗ್ರಾಮದ ಪಾಳೆಕಟ್ಟೆ ಎಂಬಲ್ಲಿ ಪರಿಶಿಷ್ಟರ ಬಡಾವಣೆಗೆ ತಮ್ಮ ಮೊದಲ ಭೇಟಿ ನೀಡಿ ಸಮಗ್ರ ಹಿಂದೂ ಸಮಾಜದ ಸಂಘಟನೆಗೆ ತಾವೂ ಸಿದ್ಧ ಎಂದಿದ್ದಾರೆ.

ಅಯೋಧ್ಯೆ ರಾಮ ಮಂದಿರ ನಿರ್ಮಾಣವನ್ನು ಮುಂದಿಟ್ಟುಕೊಂಡು ಮತ್ತೊಮ್ಮೆ ಭಾರತದಲ್ಲಿ ಹಿಂದೂ ಸಮಾಜವನ್ನು ಸಂಘಟನಾತ್ಮಕವಾಗಿ ಸಶಕ್ತ ಮತ್ತು ಸದೃಢಗೊಳಿಸಬೇಕಾಗಿದೆ. ಈ ಆಶಯದೊಂದಿಗೆ ಸುಮಾರು 120 ಮನೆಗಳನ್ನು ಹೊಂದಿರುವ ಈ ಬಡಾವಣೆಗೆ ಭೇಟಿ ನೀಡಿ 400ರಷ್ಟು ದಲಿತ ಬಂಧುಗಳಲ್ಲಿ ಹಿಂದವಃ ಸೋದರಾ ಸರ್ವೇ ಎಂಬ ಗುರು ವಿಶ್ವೇಶತೀರ್ಥ ಸಂದೇಶದಂತೆ ವಿಶ್ವಾಸ ತುಂಬಿದರು.

ಶ್ರೀಗಳು ಆಗಮಿಸುವ ಬಗ್ಗೆ ಸ್ಥಳೀಯ ನಗರಸಭಾ ಸದಸ್ಯ ಮತ್ತು ಸಂಘ ಪರಿವಾರದ ಸ್ವಯಂ ಸೇವಕ ವಿಜಯ ಕೊಡವೂರು ಮತ್ತು ಶ್ರೀಗಳ ಆಪ್ತರಾಗಿರುವ ಸಾಮಾಜಿಕ ಕಾರ್ಯಕರ್ತ ವಾಸುದೇವ ಭಟ್ ಪೆರಂಪಳ್ಳಿ ಎರಡು ದಿನಗಳ ಮೊದಲೇ ಕಾಲೊನಿಗೆ ಭೇಟಿ ನೀಡಿ ಮಾಹಿತಿ ನೀಡಿದ್ದರು. ಅದರಂತೆ ಉತ್ಸಾಹ ಮತ್ತು ಸಂತೋಷದಿಂದ ನಿವಾಸಿಗಳು ಕಾಲೊನಿಯ ರಸ್ತೆಗಳಲ್ಲಿ ತಳಿರು ತೋರಣ ರಂಗೋಲಿ ಹಾಕಿ ಸಿಂಗಾರಿಸಿದ್ದರು. ಸಾಮೂಹಿಕ ಭಜನೆಯೊಂದಿಗೆ ಶ್ರೀಗಳನ್ನು ಬರಮಾಡಿಕೊಂಡರು.

ಬಳಿಕ ಅಲ್ಲಿನ ಮೂರು ಮನೆಗಳಿಗೆ ಭೇಟಿ ನೀಡಿ ರಾಮದೀಪಗಳನ್ನು ಬೆಳಗಿಸಿ ಮನೆ ಮಂದಿಯೊಂದಿಗೆ ಕುಶಲೋಪರಿ ನಡೆಸಿದ ಶ್ರೀಗಳು ಶ್ರೀರಾಮ ಜಯರಾಮ ಜಯಜಯರಾಮ ಮಂತ್ರದೀಕ್ಷೆ ಕೊಟ್ಟು ನಿತ್ಯ ಶುದ್ಧ ಮನಸ್ಸಿನಿಂದ ಈ ಮಂತ್ರ ಜಪಿಸುವಂತೆ ತಿಳಿಸಿದರು. ಮೂರು ಮನೆಯವರು ಶ್ರೀಗಳಿಗೆ ಫಲ ಪುಷ್ಪ ಸಹಿತ ಭಕ್ತಿ ಗೌರವ ಅರ್ಪಿಸಿದರು.‌ ಶ್ರೀ ಮಠದ ವತಿಯಿಂದ ಎಲ್ಲ ಮನೆಗಳಿಗೆ ದೀಪ ಒದಗಿಸಿ ರಾಮದೀಪ ಬೆಳಗಿಸಲಾಯಿತು.

ಅಲ್ಲಿಂದ ಬಡಾವಣೆಯ ಶ್ರೀ ಮೂಕಾಂಬಿಕಾ ಭಜನಾ ಮಂದಿರಕ್ಕೆ ಬಂದು ಶ್ರೀ ದೇವಿಯ ಮುಂಭಾಗದಲ್ಲಿ ದೀಪ ಹಚ್ಚಿ ಮಂಗಳಾರತಿ ಬೆಳಗಿದರು. ಮುಂಭಾಗದ ಅಂಗಣದಲ್ಲಿ ಸಮಸ್ತ ನಿವಾಸಿಗಳಿಗೆ ಸಂದೇಶ ನೀಡಿ ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಸಮಸ್ತ ಹಿಂದೂ ಸಮಾಜದ ಸಹಕಾರ ಸಹಭಾಗಿತ್ವ ಪಡೆಯಲು ಎಲ್ಲ ಸ್ತರಗಳ ಹಿಂದೂ ಬಂಧುಗಳನ್ನು ಭೇಟಿಯಾಗುತ್ತಿದ್ದೇವೆ ಅದರಂತೆ ಇಲ್ಲಿಗೆ ಆಗಮಿಸಿದ್ದೇವೆ. ಮಂದಿರ ನಿರ್ಮಾಣ ಕಾರ್ಯ ನಿರ್ವಿಘ್ನವಾಗಿ ನಡೆದು ಇಡೀ ದೇಶಕ್ಕೆ ರಾಮನ ಕೃಪೆಯಾಗಿ ಶಾಂತಿ ಸುಭಿಕ್ಷೆ ಸಮೃದ್ಧಿ ನೆಲೆಸಲು ನಾವೆಲ್ಲ ಪ್ರತೀನಿತ್ತ ಮನೆಮನೆಗಳಲ್ಲಿ ರಾಮನಿಗಾಗಿ ದೀಪ ಬೆಳಗಿ ರಾಮಂತ್ರಜಪ ರಾಮ ಭಜನೆ ನಡೆಸಬೇಕು.

ಪ್ರತಿಯೊಬ್ಬರಲ್ಲಿ ರಾಮನ ಜೀವನಾದರ್ಶಗಳು ನೆಲೆಗೊಳ್ಳಬೇಕು.‌ ನಾವೆಲ್ಲ ಹಿಂದೂ ಸಮಾಜದ ಅವಿಭಾಜ್ಯ ಅಂಗವಾಗಿ ಸಮಾಜದ ಒಳಿತಿಗೆ ಶ್ರಮಿಸಬೇಕು ಎಂದರು. ಎಲ್ಲರಿಗೂ ರಾಮ ಮಂತ್ರ ಬೋಧಿಸಿದರು. ಸುಬ್ರಹ್ಮಣ್ಯ ಷಷ್ಠಿಯಾದ್ದರಿಂದ ಶ್ರೀ ಮಠದ ಅಧೀನದಲ್ಲಿರುವ ಮುಚ್ಲುಕೋಡು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಲಡ್ಡು ಪ್ರಸಾದ ಮಾಡಿಸಿ ತಂದಿದ್ದು ಎಲ್ಲರಿಗೂ ಶ್ರೀಗಳು ನೀಡಿ ಆಶೀರ್ವದಿಸಿದರು.

ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ವಿಧಿವಶರಾಗಿ ಒಂದು ವರ್ಷದೊಳಗೆ ಶ್ರೀಮಠದ ಎಲ್ಲ ಜವಾಬ್ದಾರಿಗಳಿಗೆ ಹೆಗಲು ಕೊಟ್ಟ ಶ್ರೀವಿಶ್ವಪ್ರಸನ್ನತೀರ್ಥರು ಗುರುಗಳು ನಿರ್ವಹಿಸಿದ್ದ ಸಾಮಾಜಿಕ ಕಾರ್ಯಗಳನ್ನೂ ಮುನ್ನಡೆಸುವ ಸಂಕಲ್ಪ ಮಾಡಿರುವುದು ಅತ್ಯಂತ ಶ್ಲಾಘನೀಯ ಎಂದು ವಿಜಯ ಕೊಡವೂರು ತಿಳಿಸಿದರು. ವಿಹಿಂಪ‌ ಜಿಲ್ಲಾಧ್ಯಕ್ಷ ವಿಷ್ಣುಮೂರ್ತಿ ಆಚಾರ್ಯ ಉಪಸ್ಥಿತರಿದ್ದರು