ರಾಹುಲ್ ಗಾಂಧಿ ಮಾನನಷ್ಟ ಮೊಕದ್ದಮೆ: ಕೆಳ ನ್ಯಾಯಾಲಯದ ಆದೇಶ ಮೇ 15 ರವರೆಗೆ ತಡೆಹಿಡಿದ ಪಟ್ನಾ ಹೈಕೋರ್ಟ್

ನವದೆಹಲಿ: ‘ಮೋದಿ ಉಪನಾಮ’ ಮಾನನಷ್ಟ ಪ್ರಕರಣದಲ್ಲಿ ಕೆಳ ನ್ಯಾಯಾಲಯದ ಆದೇಶವನ್ನು ಮೇ 15 ರವರೆಗೆ ತಡೆಹಿಡಿಯುವ ಮೂಲಕ ಪಾಟ್ನಾ ಹೈಕೋರ್ಟ್ ಸೋಮವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ತಾತ್ಕಾಲಿಕ ಉಪಶಮನ ನೀಡಿದೆ.

ಇದಕ್ಕೂ ಮೊದಲು, ‘ಮೋದಿ ಉಪನಾಮ’ ಕುರಿತು ರಾಹುಲ್ ಗಾಂಧಿ ಆಕ್ಷೇಪಾರ್ಹ ಹೇಳಿಕೆಗಳಿಗಾಗಿ 2019 ರಲ್ಲಿ ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ರಾಹುಲ್ ವಿರುದ್ಧ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ಏಪ್ರಿಲ್ 12 ರಂದು ಹಾಜರಾಗುವಂತೆ ಮತ್ತು ತನ್ನ ವಾದವನ್ನು ಮಂಡಿಸುವಂತೆ ಪಾಟ್ನಾದ ಕೆಳ ನ್ಯಾಯಾಲಯವು ಕಾಂಗ್ರೆಸ್ ನಾಯಕನನ್ನು ಕೇಳಿದೆ.

ಏಪ್ರಿಲ್ 22 ರಂದು, ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಸುಶೀಲ್ ಕುಮಾರ್ ಮೋದಿ ಅವರು ತಮ್ಮ ವಿರುದ್ಧ ಹೂಡಿರುವ ಮಾನನಷ್ಟ ಮೊಕದ್ದಮೆಯಲ್ಲಿ ಕೆಳ ನ್ಯಾಯಾಲಯವು ಹೊರಡಿಸಿದ ಸಮನ್ಸ್ ಅನ್ನು ರದ್ದುಗೊಳಿಸುವಂತೆ ಕೋರಿ ಗಾಂಧಿ ಅವರು ಪಾಟ್ನಾ ಹೈಕೋರ್ಟ್‌ಗೆ ಮೊರೆ ಹೋಗಿದ್ದರು.

ಈ ವಿಷಯದ ಬಗ್ಗೆ ವಾದವನ್ನು ಮಂಡಿಸಲು ನ್ಯಾಯಾಲಯವು ಅವರನ್ನು ಕೇಳಿದೆ ಎಂದು ಸುಶೀಲ್ ಮೋದಿ ಪರ ವಕೀಲ ಎಸ್ ಡಿ ಸಂಜಯ್ ತಿಳಿಸಿದ್ದಾರೆ.

ಕೆಳ ನ್ಯಾಯಾಲಯದ ಆದೇಶ ರದ್ದುಪಡಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದೆವು. ಒಂದು ವಿಷಯವು ಈಗಾಗಲೇ ಸೂರತ್ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವಾಗ, ಅದೇ ವಿಷಯದಲ್ಲಿ ಬೇರೆ ನ್ಯಾಯಾಲಯದಲ್ಲಿ ಮತ್ತೊಂದು ವಿಚಾರಣೆಯನ್ನು ನಡೆಸಲಾಗುವುದಿಲ್ಲ. ಇದು ಅಕ್ರಮವಾಗಿದೆ. ಮುಂದಿನ ವಿಚಾರಣೆ ಮೇ 15 ರಂದು ನಡೆಯಲಿದ್ದು, ಅಲ್ಲಿಯವರೆಗೆ ಕೆಳ ನ್ಯಾಯಾಲಯದ ಎಲ್ಲಾ ಪ್ರಕ್ರಿಯೆಗಳಿಗೆ ತಡೆ ನೀಡಲಾಗಿದೆ ಎಂದು ರಾಹುಲ್ ಗಾಂಧಿ ಪರ ವಕೀಲ ವೀರೇಂದ್ರ ರಾಥೋಡ್ ಎಎನ್‌ಐಗೆ ತಿಳಿಸಿದ್ದಾರೆ.