ಸುರತ್ಕಲ್‌ನಲ್ಲಿ ವಂದೇ ಭಾರತ್ ರೈಲಿಗೆ ನಿಲುಗಡೆ ನೀಡುವಂತೆ ಪ್ರಯಾಣಿಕರ ಒತ್ತಾಯ!

ಸುರತ್ಕಲ್: ಬೆಂಗಳೂರು–ಕಾರವಾರ ನೂತನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಸುರತ್ಕಲ್‌ನಲ್ಲಿ ನಿಲುಗಡೆ ನೀಡದಿರುವ ರೈಲ್ವೆ ಇಲಾಖೆಯ ನಿರ್ಧಾರ ಸ್ಥಳೀಯ ಪ್ರಯಾಣಿಕರು ಹಾಗೂ ನಿವಾಸಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಹಿಂದಿನ ರೈಲಿಗೆ ತೋಕೂರಿನಲ್ಲಿ ನಿಲುಗಡೆ ನೀಡಲಾಗುತ್ತಿತ್ತು. ಅದೇ ವ್ಯವಸ್ಥೆಯನ್ನು ನೂತನ ವಂದೇ ಭಾರತ್ ರೈಲಿನಲ್ಲಿಯೂ ಮುಂದುವರಿಸಲಾಗಿದೆ. ಆದರೆ, ಪ್ರಮುಖ ವಾಣಿಜ್ಯ ಮತ್ತು ಶೈಕ್ಷಣಿಕ ಕೇಂದ್ರವಾಗಿರುವ ಸುರತ್ಕಲ್‌ನಲ್ಲಿಯೂ ನಿಲುಗಡೆ ಕಲ್ಪಿಸಬೇಕೆಂಬ ಬೇಡಿಕೆ ಬಲವಾಗಿ ಕೇಳಿಬಂದಿದೆ.

ಸುರತ್ಕಲ್ ಪ್ರಮುಖ ಶೈಕ್ಷಣಿಕ, ಕೈಗಾರಿಕಾ ಹಾಗೂ ವಾಣಿಜ್ಯ ಕೇಂದ್ರವಾಗಿ ಬೆಳೆದಿದೆ. ಇಲ್ಲಿ ಎನ್‌ಐಟಿಕೆ, ಗೋವಿಂದ ದಾಸ್ ಕಾಲೇಜು, ವಿದ್ಯಾದಾಯಿನಿ ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳು ಹಾಗೂ ಖಾಸಗಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕಾಲೇಜುಗಳಿವೆ. ಅಲ್ಲದೆ, ಎಂಆರ್‌ಪಿಎಲ್, ಎಂಸಿಎಫ್ ಸೇರಿದಂತೆ ಪ್ರಮುಖ ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿದಿನ ಸಾವಿರಾರು ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಉದ್ಯಮಿಗಳು ಈ ಪ್ರದೇಶದಿಂದ ವಿವಿಧೆಡೆ ಪ್ರಯಾಣಿಸುತ್ತಾರೆ. ಹೀಗಾಗಿ ವಂದೇ ಭಾರತ್ ರೈಲಿಗೆ ಸುರತ್ಕಲ್‌ನಲ್ಲಿ ನಿಲುಗಡೆ ನೀಡುವುದರಿಂದ ಹೆಚ್ಚಿನ ಜನರಿಗೆ ಅನುಕೂಲವಾಗಲಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.