ಉಡುಪಿ: ಪ್ರಶಿಕ್ಷಣ ವರ್ಗದಂತಹ ಶಿಬಿರಗಳು ಪಕ್ಷದ ವಿಚಾರಧಾರೆಗಳನ್ನು ತಿಳಿದುಕೊಳ್ಳುವುದರ ಜತೆಗೆ ಪಕ್ಷದ ಕಾರ್ಯಕರ್ತರ ವ್ಯಕ್ತಿತ್ವ ವಿಕಸನಕ್ಕೂ ಪೂರಕವಾಗಿವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.
ಬಿಜೆಪಿ ಉಡುಪಿ ನಗರ ಘಟಕದ ಆಶ್ರಯದಲ್ಲಿ ಮಣಿಪಾಲ ಹೋಟೆಲ್ ಕಂಟ್ರಿ ಇನ್ ಸಭಾಂಗಣದಲ್ಲಿ ಆಯೋಜಿಸಿದ್ದ ಎರಡು ದಿನಗಳ ಪ್ರಶಿಕ್ಷಣ ವರ್ಗ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ನಮ್ಮ ರಾಷ್ಟ್ರದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೂಡ ಪಕ್ಷದ ಪ್ರಶಿಕ್ಷಣ ವರ್ಗಗಳಲ್ಲಿ ಸಂಪೂರ್ಣವಾಗಿ ತೊಡಗಿಸಿ ಕೊಳ್ಳುತ್ತಿದ್ದಾರೆ. ಇದರಿಂದ ಪಕ್ಷದ ಪ್ರಶಿಕ್ಷಣ ವರ್ಗ ಎಷ್ಟು ಮಹತ್ವಪೂರ್ಣ ಎಂದು ತಿಳಿದು ಕೊಳ್ಳಬಹುದು. ಪಕ್ಷ ಕಾರ್ಯಕರ್ತರೆಲ್ಲರೂ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮಾತನಾಡಿ, 370 ವಿಧಿಯ ರದ್ದತಿ, ಪೌರತ್ವ ತಿದ್ದುಪಡಿ ಕಾಯಿದೆ ಮುಂತಾದ ರಾಷ್ಟ್ರೀಯ ಹಿತಾಸಕ್ತಿಯ ಪ್ರಮುಖ ವಿಷಯಗಳು ಬಿಜೆಪಿ ಸಂಸ್ಥಾಪನೆಯ ಸಮಯದ ಕನಸುಗಳಾಗಿದ್ದು, ಅದು ಸಾಕಾರಗೊಂಡಿದೆ. ಪಕ್ಷ ಕಾರ್ಯಕರ್ತರನ್ನು ಸುಶಿಕ್ಷಿತ ಗೊಳಿಸುವ ಪ್ರಶಿಕ್ಷಣ ಪದ್ದತಿಯಿಂದ ಸಂಘಟಿತಗೊಂಡು ಪಕ್ಷವು ಅಧಿಕಾರಕ್ಕೆ ಬರುವಲ್ಲಿ ಯಶಸ್ವಿಯಾಗಿದೆ ಎಂದರು.
ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ ಶೆಟ್ಟಿ, ಜಿಲ್ಲಾ ಪ್ರಕೋಷ್ಠಗಳ ಸಂಚಾಲಕ ರಘುವೀರ್ ಶೆಣೈ, ಸಹ ಸಂಚಾಲಕ ಟಿ.ಸುಬ್ರಮಣ್ಯ ಪೈ, ನಗರ ಸಂಚಾಲಕ ಲೋಕಯ್ಯ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ, ನಗರಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್, ಉಪಾಧ್ಯಕ್ಷೆ ಲಕ್ಷ್ಮಿ ಮಂಜುನಾಥ್ ಕೊಳ ಉಪಸ್ಥಿತರಿದ್ದರು.
ನಗರ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ್ ಮಣಿಪಾಲ ನಿರೂಪಿಸಿದರು. ದಿನೇಶ್ ಅಮೀನ್ ವಂದಿಸಿದರು.