ಮಣಿಪಾಲದಲ್ಲಿ ಮಾನವ ಅಸ್ಥಿಪಂಜರದ ಭಾಗಗಳು ಪತ್ತೆ

ಉಡುಪಿ: ಮಣಿಪಾಲದ ಅನಂತನಗರದ ಮೂರನೇ ಕ್ರಾಸ್‌ನಲ್ಲಿರುವ ಸರ್ಕಾರಿ ಜಾಗದ ಹಾಡಿಯಲ್ಲಿ ಮಾನವ ಅಸ್ಥಿಪಂಜರದ ಕೆಲವು ಭಾಗಗಳು ಬುಧವಾರ ಪತ್ತೆಯಾಗಿವೆ.

ಖಾಲಿ ಜಾಗವನ್ನು ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಭಾಗಶಃ ತಲೆಬುರುಡೆ ಹಾಗೂ ಕೈಗಳ ಮೂಳೆಗಳು ಪತ್ತೆಯಾಗಿವೆ. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೂಳೆಗಳ ಭಾಗಗಳನ್ನು ಸಂಗ್ರಹಿಸಿ, ಹೆಚ್ಚಿನ ಪರೀಕ್ಷೆಗಾಗಿ ಮಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.

ಮೂಳೆಗಳು ಯಾರಿಗೆ ಸೇರಿವೆ ಹಾಗೂ ಅವು ಯಾವಾಗಿನವು ಎಂಬುದನ್ನು ವಿಧಿವಿಜ್ಞಾನ ಪರೀಕ್ಷೆಯ ಬಳಿಕ ತಿಳಿಯಬೇಕಿದೆ.