ಪರಿಸರ ಉಳಿಸುವ ಪ್ರಜ್ಞೆ ಮನೆಯಿಂದಲೇ ಆರಂಭವಾಗಬೇಕು: ಸಿ.ಎಂ.ಜೋಷಿ

ಉಡುಪಿ: ಪರಿಸರವನ್ನು ಹೇಗೆ ಉಳಿಸಬೇಕು, ಬೆಳೆಸಬೇಕೆಂಬ ಪ್ರಜ್ಞೆ ಶಾಲಾ ಮಟ್ಟದಿಂದಲೇ
ಶುರುವಾಗಿದ್ದರೂ, ಪರಿಸರ ಉಳಿಸುವ ಪ್ರಜ್ಞೆಯು ಮನೆಯಿಂದಲೇ ಶುರುವಾಗಬೇಕು ಎಂದು
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಮತ್ತು ಪ್ರಧಾನ ಜಿಲ್ಲಾ ಹಾಗೂ ಸತ್ರ
ನ್ಯಾಯಾಧೀಶ ಸಿ.ಎಂ.ಜೋಷಿ ಹೇಳಿದ್ದಾರೆ.
ಅವರು ಗುರುವಾರ, ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಾರ್ವಜನಿಕ
ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಉಡುಪಿ, ಕರ್ನಾಟಕ ರಾಜ್ಯ
ಮಾಲಿನ್ಯ ನಿಯಂತ್ರಣ ಮಂಡಳಿ ಉಡುಪಿ ಇವರ ಸಹಯೋಗದಲ್ಲಿ, ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪರಿಸರ ಮಿತ್ರ ಶಾಲೆ ಪ್ರಶಸ್ತಿ ಪ್ರದಾನ
ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಮಾನವನ ಯೋಚನಾ ಶಕ್ತಿಯಿಂದ ಹೊಸ ಅವಿಷ್ಕಾರಗಳಿಗೆ ಯಾವುದೇ ಕೊನೆ ಇಲ್ಲ. ಕಳೆದ 50
ವರ್ಷದಿಂದ ಈ ರೀತಿಯ ಯೋಜನೆಗಳು, ಯೋಚನೆಗಳು ಪರಿಸರ ಸಂರಕ್ಷಣೆಗೆ ಹೆಚ್ಚು ಹೆಚ್ಚು
ಮಾಡಬೇಕಿತ್ತು ಎಂದು ಅನಿಸುತ್ತಿದೆ. ಪರಿಸರ ಉಳಿಸುವ ಕುರಿತು ಶಾಲಾ ಮಕ್ಕಳಿಗೆ ಮಾತ್ರ
ಜಾಗೃತಿ ಮೂಡಿಸುವುದರ ಜೊತೆಗೆ ನಾಗರೀಕರು ಏನು ಮಾಡುವುದು ಎಂಬುದನ್ನು ಯೋಚಿಸಬೇಕು.
ಪ್ರತಿ ಮನೆಗಳಿಂದ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಬೇಕಿದ್ದು, ಬಹಳ ದೊಡ್ಡ ಪ್ರಮಾಣದಲ್ಲಿ  ಪರಿಸರ ಸಂರಕ್ಷಿಸುವ ಕಾರ್ಯದ ಅಗತ್ಯವಿದೆ. ಪರಿಸರ ನನ್ನದು ಎಂಬ ಮನಸ್ಥಿತಿ ಎಲ್ಲರಲ್ಲಿ ಮೂಡಬೇಕು, ಜಿಲ್ಲೆ, ರಾಜ್ಯ ಮತ್ತು ದೇಶವನ್ನು ಪರಿಸರ ಮಿತ್ರವನ್ನಾಗಿ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ನ್ಯಾಯಾಧೀಶರು ಹೇಳಿದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಜಿಲ್ಲಾ ಕಾರ್ಯದರ್ಶಿ ದಿನೇಶ್ ಶೆಟ್ಟಿಗಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಸಸ್ಯಶಾಸ್ತ್ರ ಪ್ರಾಧ್ಯಾಪಕ ವಿ. ಅರವಿಂದ ಹೆಬ್ಬಾರ್ ನಾವು ಸೇವಿಸುವ ಅಹಾರ ಎಷ್ಟು ಸುರಕ್ಷಿತ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಜಿಲ್ಲಾ ಪರಿಸರ ಮಿತ್ರ ಶಾಲೆ ಕಾರ್ಯಕ್ರಮದಡಿಯಲ್ಲಿ ಜಿಲ್ಲೆಯ 197 ಶಾಲೆಗಳು ಭಾಗವಹಿಸಿದ್ದು, ಪ್ರಥಮ ಬಹುಮಾನ ಪಡೆದ ಕಲ್ಯಾಣಪುರ ಡಾ. ಟಿ.ಎಂ.ಎ.ಪೈ ಪ್ರೌಢಶಾಲೆಗೆ ಶಾಶ್ವತ ಫಲಕ ಮತ್ತು ಮೂವತ್ತು ಸಾವಿರ ಗೌರವ ಧನ ಹಾಗೂ 10 ಶಾಲೆಗಳಿಗೆ ಹಸಿರು ಶಾಲೆ ಮತ್ತು 10 ಶಾಲೆಗಳಿಗೆ ಹಳದಿ ಶಾಲೆ ಪ್ರಶಸ್ತಿ ನೀಡಲಾಯಿತು.

ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕ.ರಾ.ಮಾ.ನಿ.ಮಂ.ನ ಜಿಲ್ಲಾ ಪರಿಸರ ಅಧಿಕಾರಿ ಹೆಚ್.ಲಕ್ಷ್ಮೀಕಾಂತ್ ಸ್ವಾಗತಿಸಿದರು. ಕ.ರಾ.ಮಾ.ನಿ.ಮಂ.ನ ಮಂಗಳೂರು ವಲಯದ ಹಿರಿಯ ಪರಿಸರ ಅಧಿಕಾರಿ ರಾಜಶೇಖರ್ ಬಿ.
ಪುರಾಣಿಕ್, ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್, ಪರಿಸರ ತಜ್ಞ ಆರೂರು ಮಂಜುನಾಥ್ ರಾವ್, ಪಿ.ಕೆ. ರಾಜ್ ಗೋಪಾಲ್, ವೈ. ಭುವನೇಂದ್ರ ರಾವ್ ಉಪಸ್ಥಿತರಿದ್ದರು.